ADVERTISEMENT

‘ಶಕ್ತಿ ಕೇಂದ್ರ’ದಲ್ಲೇ ಕುಸಿತ: ಹೈಕಮಾಂಡ್ ಗರಂ

ಬಿಜೆಪಿ ವಲಯದಲ್ಲಿ ಶುರುವಾಗಿದೆ ಅವಲೋಕನ

ಎಂ.ಮಹೇಶ
Published 3 ಮೇ 2021, 14:24 IST
Last Updated 3 ಮೇ 2021, 14:24 IST
ಬೆಳಗಾವಿ ಲೋಕಸಭಾ ಕ್ಷೇತ್ರದ ನಕ್ಷೆ
ಬೆಳಗಾವಿ ಲೋಕಸಭಾ ಕ್ಷೇತ್ರದ ನಕ್ಷೆ   

ಬೆಳಗಾವಿ: ಸಚಿವರ ಪಡೆ, ಪ್ರಮುಖ ಹುದ್ದೆಗಳನ್ನು ಪಡೆದಿರುವ ನಾಯಕರು, ಶಾಸಕರ ಬಲ, ವಿವಿಧ ನಿಗಮ–ಮಂಡಳಿಗಳ ಅಧ್ಯಕ್ಷ ಗಾದಿಗಳನ್ನು ಗಳಿಸಿರುವ ‘ಶಕ್ತಿ ಕೇಂದ್ರ’ವಾದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಪ್ರಯಾಸದ ಗೆಲುವು ಸಿಕ್ಕಿರುವುದಕ್ಕೆ ಬಿಜೆಪಿ ಹೈಕಮಾಂಡ್‌ ಗರಂ ಆಗಿದೆ.

ಭದ್ರಕೋಟೆ ಆಗಿರುವ ಕ್ಷೇತ್ರದಲ್ಲಿನ ಚಾವಣಿಯು ಅಲುಗಾಡಿರುವುದು ಪಕ್ಷದವರನ್ನು ಚಿಂತೆಗೀಡು ಮಾಡಿದೆ. ಗೆಲುವನ್ನು ಸಂಭ್ರಮಿಸುವ ಸ್ಥಿತಿಯಲ್ಲೂ ಅವರಿಲ್ಲ. ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲೇ ಹಿನ್ನಡೆ ಅನುಭವಿಸಿರುವುದು ಇದಕ್ಕೆ ಕಾರಣ. ‘ಹೇಳಿಕೊಳ್ಳುವ ಸಾಧನೆ’ ಆಗದಿರುವುದಕ್ಕೇ ಕಾರಣಗಳೇನು? ಹೊಡೆತ ಬಿದ್ದಿರುವುದು ಎಲ್ಲೆಲ್ಲಿ? ಸುಧಾರಿಸಿಕೊಳ್ಳಲು ಏನು ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಇಟ್ಟುಕೊಂಡು ಅವಲೋಕನವನ್ನು ಆ ಪಕ್ಷದವರು ಆರಂಭಿಸಿದ್ದಾರೆ.

ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಕೆಲಸ ಮಾಡದಿರುವವರ ಬಗ್ಗೆ ಹೈಕಮಾಂಡ್‌ ಜೊತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಗರಂ ಆಗಿದ್ದಾರ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಹಿಸುವುದಿಲ್ಲ ಎನ್ನುವ ಸಂದೇಶ:ಹೊರಗಿನವರ ಹಸ್ತಕ್ಷೇಪ ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ಪಕ್ಷದ ಒಂದು ವಲಯ ರವಾನಿಸಿದೆ.

ಈ ಫಲಿತಾಂಶವು ಕಲಿಸಿರುವ ಪಾಠವೇನು, ನೀಡಿರುವ ಸಂದೇಶವೇನು ಎನ್ನುವುದನ್ನು ತಿಳಿದುಕೊಳ್ಳುವ ಪ್ರಕ್ರಿಯೆ ಪಕ್ಷದ ಮಟ್ಟದಲ್ಲಿ ನಡೆಯುತ್ತಿದೆ. ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದು ಕೂಡ ಒಳಹೊಡೆತ ನೀಡಿದೆ. ಎಂಇಎಎಸ್ ಹಾಗೂ ಶಿವಸೇನಾ ಅಬ್ಬರ ಹೆಚ್ಚಾದಾಗಲೇ ಎಚ್ಚೆತ್ತುಕೊಳ್ಳದಿರುವುದು ಮತ್ತು ಮತ ವಿಭಜನೆ ಆಗುತ್ತದೆ ಎನ್ನುವ ಮುನ್ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡಿದ್ದು ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.

ಅನುಕಂಪದ ಅಲೆಯೊಂದನ್ನೇ ನೆಚ್ಚಿಕೊಂಡು ಕುಳಿತಿದ್ದು ಮತ್ತು ನಗರದ ಎಲ್ಲ ಕಡೆಯೂ ಮತಯಾಚನೆ ಕಾರ್ಯಕ್ರಮಗಳು ನಡೆಯದಿರುವುದು ಹಿನ್ನಡೆಗೆ ಕಾರಣವಾಗಿದೆ ಎಂದಯ ವಿಶ್ಲೇಷಿಸಲಾಗುತ್ತಿದೆ.

ಅವಲೋಕನ ಅಗತ್ಯವಾಗಿದೆ:ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ನಮ್ಮ ಮತ ಬ್ಯಾಂಕ್‌ ಅನ್ನು ಕಾಂಗ್ರೆಸ್‌ನವರು ವಿಭಜನೆ ಮಾಡಿದರು. ಎಂಇಎಸ್ ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಪಡೆದ ಮತಗಳು ನಮ್ಮ ಸಾಂಪ್ರದಾಯಿಕ ಮತಗಳಾಗಿವೆ. ಮರಾಠಿ ಭಾಷಿಗರಿಲ್ಲದ ಇತರ ಕಡೆಗಳಲ್ಲೂ ನಮ್ಮ ಸಾಂಪ್ರದಾಯಿಕ ಮತಗಳನ್ನು ಪ್ರತಿಸ್ಪರ್ಧಿಗಳು ಕಿತ್ತುಕೊಂಡಿದ್ದಾರೆ. ಕೋವಿಡ್ ಕಾರಣದಿಂದಾಗಿ ಮತದಾನ ಪ್ರಮಾಣ ಕಡಿಮೆಯಾಗಿದ್ದು ಕೂಡ ದೊಡ್ಡ ಹೊಡೆತ ಕೊಟ್ಟಿದೆ’ ಎಂದು ತಿಳಿಸಿದರು.

‘ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅವಲೋಕನ ಆರಂಭವಾಗಿದೆ. ಸರಿಪಡಿಸುವ ಕೆಲಸ ಆಗಬೇಕಾಗುತ್ತದೆ. ಅದು ನಡೆಯಲಿದೆ’ ಎನ್ನುತ್ತಾರೆ ಅವರು.

‘ಮರಾಠಿ, ಕನ್ನಡ ಹಾಗೂ ಭಗವಾಧ್ವಜ ಮತ್ತು ಕನ್ನಡ ಧ್ವಜದ ವಿಷಯವನ್ನು ಮುಂದು ಮಾಡಿ ನಮ್ಮ ಮತಗಳನ್ನು ವಿಭಜನೆ ಮಾಡುವಲ್ಲಿ ಎಂಇಎಸ್ ಹಾಗೂ ಶಿವಸೇನಾದವರು ಯಶಸ್ವಿಯಾಗಿದ್ದಾರೆ. ಆ ಪ್ರಾಯೋಜಿತ ಅಭ್ಯರ್ಥಿಯಿಂದ ನಮಗೆ ಹೊಡೆತ ಬಿದ್ದಿದೆ. ಕ್ಷೇತ್ರ ಉಳಿಸಿಕೊಂಡಿದ್ದೇವೆ. ಅವಲೋಕನವೂ ಆರಂಭವಾಗಿದೆ. ಜನರಿಂದ ಪಾಠವಂತೂ ಸಿಕ್ಕಿದೆ. ಸುಧಾರಿಸಿಕೊಳ್ಳಲು ಯತ್ನ ನಡೆದೇ ನಡೆಯುತ್ತದೆ ’ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.