ಚಿಕ್ಕೋಡಿ: ಮಹಾ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣಾ ,ಉಪ ನದಿಗಳು ಭೋರ್ಗರೆಯುತ್ತಿವೆ. ಮಹಾರಾಷ್ಟ್ರದಲ್ಲಿ ಕೃಷ್ಣಾ ಹಾಗೂ ನದಿಗಳಿಗೆ ನಿರ್ಮಿಸಿದ ಅಣೆಕಟ್ಟೆಗಳು ಭಾಗಶಃ ಭರ್ತಿಯಾಗಿವೆ. ವಾಯುಭಾರ ಕುಸಿತದಿಂದ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮತ್ತೆ ಮಳೆಯಾದಲ್ಲಿ ಉಪ ವಿಭಾಗದ ನದಿ ತೀರದ ಗ್ರಾಮಗಳ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಲಿದೆ.
ಮಹಾರಾಷ್ಟ್ರದ ಕೊಂಕಣದಲ್ಲಿ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ಮಳೆ ಬೀಳುತ್ತಿದೆ. ಚಿಕ್ಕೋಡಿ ಉಪವಿಭಾಗದದಲ್ಲಿ ಕೃಷ್ಣಾ ನದಿಗೆ 3 ಲಕ್ಷ ಕ್ಯುಸೆಕ್ ಗೂ ಹೆಚ್ಚು ನೀರು ಹರಿದು ಜನರು ಕಂಗಾಲಾಗಿದ್ದಾರೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದ ನವಜಾ, ವಾರಣಾ, ಕೊಯ್ನಾ, ಧೂಮ, ಕಾಳಮ್ಮವಾಡಿ, ರಾಧಾನಗರಿ, ಮಹಾಬಳೇಶ್ವರ ಮುಂತಾದ ಪ್ರದೇಶಗಳಲ್ಲಿ ಕಳೆದ 15-20 ದಿನಗಳಿಂದ 15 ಸೆ.ಮೀ ನಿಂದ 30 ಸೆ.ಮೀ ವರೆಗೆ ಮಳೆ ಬಿದ್ದ ದಾಖಲೆಯಿದೆ.
ಭಾರೀ ಮಳೆಯಿಂದ ಮಹಾರಾಷ್ಟ್ರದ ಕೊಯ್ನಾ, ಕಾಳಮ್ಮವಾಡಿ, ರಾಧಾನಗರಿ, ವಾರಣಾ, ಕಣೇರ ಜಲಾಶಯಗಳು ಭಾಗಶಃ ಭರ್ತಿಯಾಗಿವೆ. ಒಂದಡೆ ಮಳೆ ನೀರು, ಮತ್ತೊಂದೆಡೆ ಅಣೆಕಟ್ಟೆಯಿಂದ ಬಿಡುವ ನೀರಿನಿಂದ ಚಿಕ್ಕೋಡಿ ಉಪ ವಿಭಾಗದ ಜನರಲ್ಲಿ ಮತ್ತೆ ಪ್ರವಾಹ ಭೀತಿ ಕಾಡುತ್ತಿದೆ.
ಕಳೆದ 15-20 ದಿನಗಳಿಂದ ಕೃಷ್ಣಾ ನದಿ ನೀರು ಸುತ್ತುವರೆದು ಸಪ್ತಸಾಗರ, ತೀರ್ಥ, ಹುಲಗಬಾಳಿ ಮುಂತಾದ ಗ್ರಾಮಗಳು ನಡುಗಡ್ಡೆಗಳಾಗಿವೆ. ಮಾಂಜರಿ, ಅಂಕಲಿ, ಇಂಗಳಿ, ಶೇಗುಣಶಿ ಮುಂತಾದ ಗ್ರಾಮಗಳ ತೋಟ ಪಟ್ಟಿಯ ಜನರು ಪ್ರವಾಹ ಭೀತಿಯಿಂದ ವಸತಿ ಪ್ರದೇಶ ತೊರೆದು ಜಾನುವಾರುಗಳೊಂದಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಮಹಾರಾಷ್ಟ್ರದ ಪ್ರಮುಖ ಅಣೆಕಟ್ಟೆಗಳು ಭಾಗಶಃ ಭರ್ತಿಯಾಗಿವೆ. ಆಲಮಟ್ಟಿ ಆಣೆಕಟ್ಟೆ ಹಿನ್ನೀರಿನ ಬಾಧಿತ ಪ್ರದೇಶಗಳಲ್ಲಿ ಮತ್ತೆ ಪ್ರವಾಹ ಭೀತಿ ಇದೆ.
‘ಕಳೆದ 15 ದಿನಗಳಿಂದ ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣಾ ನದಿ ತೀರದ ಗ್ರಾಮಸ್ಥರು ಪ್ರವಾಹ ಪರಿಸ್ಥಿತಿಯಿಂದ ಕಂಗಾಲಾಗಿದ್ದು, ಮಹಾರಾಷ್ಟ್ರದ ಅಣೆಕಟ್ಟೆಗಳು ಭಾಗಶಃ ಭರ್ತಿಯಾಗಿವೆ. ’ ಎಂದು ಕೃಷ್ಣಾ ತೀರದ ನಿವಾಸಿ, ಹುಲಗಬಾಳಿಯ ರಮೇಶ ಮಡಿವಾಳರ ಆತಂಕ ವ್ಯಕ್ತಪಡಿಸಿದರು.
‘ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣಾ ಹಾಗೂ ಉಪನದಿಗಳ ನೀರಿನ ಹರಿವು ಪ್ರಮಾಣದಲ್ಲಿ ಸದ್ಯ ಇಳಿಕೆ ಕಂಡು ಬರುತ್ತಿದೆ. ಮತ್ತೆ ಮಳೆ ಪ್ರಾರಂಭವಾದಲ್ಲಿ ನದಿ ತೀರದ ಜನರಿಗೆ ತೊಂದರೆಯಾಗಲಿದೆ. ಅದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ’ ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ ತಿಳಿಸಿದ್ದಾರೆ.
ಮತ್ತೇನಾದರೂ ಭಾರಿ ಮಳೆಯಾದಲ್ಲಿ ಹುಲಗಬಾಳಿ ಹಲ್ಯಾಳ ದರೂರ ಇಂಗಳಿ ಮುಂತಾದ ಗ್ರಾಮಗಳ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ- ರಮೇಶ ಮಡಿವಾಳರ ಹುಲಗಬಾಳಿ
ನದಿ ನೀರು ಕಡಿಮೆಯಾಗುವವರೆಗೂ ಸಂತ್ರಸ್ತರು ಕಾಳಜಿ ಕೇಂದ್ರ ಸೇರಿದಂತೆ ಸುರಕ್ಷಿತ ಸ್ಥಳದಲ್ಲಿರುವಂತೆ ಮನವಿ ಮಾಡಲಾಗಿದೆಸುಭಾಷ ಸಂಪಗಾವಿ ಉಪ ವಿಭಾಗಾಧಿಕಾರಿಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.