ADVERTISEMENT

ಬೆಳಗಾವಿ: ದಸರಾ ವೈಭವಕ್ಕೆ ಅದ್ಧೂರಿ ತೆರೆ

ಪರಸ್ಪರ ಬನ್ನಿ ಮುಡಿದು ಸಂಭ್ರಮಿಸಿದ ಜನರು, ಮುಗಿಲು ಮುಟ್ಟಿದ ಜೈಕಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 15:46 IST
Last Updated 5 ಅಕ್ಟೋಬರ್ 2022, 15:46 IST
ಬೆಳಗಾವಿಯ ಕ್ಯಾಂಪ್‌ ಪ್ರದೇಶದ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ ವಿಜಯದಶಮಿ ಅಂಗವಾಗಿ ಬುಧವಾರ ಸೀಮೋಲ್ಲಂಘನೆ ಕಾರ್ಯಕ್ರಮ ಜರುಗಿತು/‍ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಬೆಳಗಾವಿಯ ಕ್ಯಾಂಪ್‌ ಪ್ರದೇಶದ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ ವಿಜಯದಶಮಿ ಅಂಗವಾಗಿ ಬುಧವಾರ ಸೀಮೋಲ್ಲಂಘನೆ ಕಾರ್ಯಕ್ರಮ ಜರುಗಿತು/‍ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ   

ಬೆಳಗಾವಿ: ನಗರವೂ ಸೇರಿ ಜಿಲ್ಲೆಯಾದ್ಯಂತ ಈ ಬಾರಿ ಜರುಗಿದ ‘ದಸರಾ ವೈಭವ’ಕ್ಕೆ ಬುಧವಾರ ಅದ್ಧೂರಿ ತೆರೆ ಬಿದ್ದಿತು. ಮಂಗಳವಾರ ಆಯುಧ ಪೂಜೆ, ಬುಧವಾರ ವಿಜಯದಶಮಿ ಕಾರ್ಯಕ್ರಮ ಸಂಭ್ರಮದಿಂದ ಜರುಗಿದವು. ಕೊರೊನಾ ಹಾವಳಿ ತಗ್ಗಿದ್ದರಿಂದ ಜನರು ಸಂಭ್ರಮದಲ್ಲಿ ಮಿಂದೆದ್ದರು.

ದಸರಾ ಅಂಗವಾಗಿ ಇಲ್ಲಿನ ಶಹಾಪುರದ ಐತಿಹಾಸಿಕ ಕಪಿಲೇಶ್ವರ ದೇವಸ್ಥಾನ, ಕೋಟೆ ಆವರಣದಲ್ಲಿರುವ ದುರ್ಗಾದೇವಿ ದೇವಸ್ಥಾನ,ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಗಣೇಶ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಹನುಮಾನ ದೇವಸ್ಥಾನ ಸೇರಿ ನಗರದ ವಿವಿಧ ದೇವಸ್ಥಾನಗಳನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ಅವುಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ಭಕ್ತರು ಮುಂಜಾವಿನಿಂದಲೇ ದೇಗುಲಕ್ಕೆ ಭೇಟಿ ನೀಡಿ, ಧಾರ್ಮಿಕ ಆಚರಣೆ ಕೈಗೊಂಡರು. ತಮ್ಮ ಇಷ್ಟಾರ್ಥ ಈಡೇರಿಸಿದ ದೇವರಿಗೆ ಕಾಣಿಕೆ ಅರ್ಪಿಸಿ ಹರಕೆ ತೀರಿಸಿದರು. ವಿವಿಧ ದೇವಸ್ಥಾನಗಳು, ಕಚೇರಿಗಳು, ವಾಣಿಜ್ಯ ಮಳಿಗೆಗಳು ಹಾಗೂ ಮನೆಗಳಲ್ಲಿ ಕೃಷಿ ಪರಿಕರಗಳು, ನಿತ್ಯ ಬಳಸುವ ಆಯುಧಗಳು ಮತ್ತು ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿದರು. ಇಲ್ಲಿನ ಸರ್ದಾರ್ಸ್‌ ಪ್ರೌಢಶಾಲೆ ಮೈದಾನದಲ್ಲಿ ದಾಂಡಿಯಾ ಕಾರ್ಯಕ್ರಮ ನೆರವೇರಿತು.

ADVERTISEMENT

ಸೀಮೋಲ್ಲಂಘನೆ: ಇಲ್ಲಿನ ಕ್ಯಾಂಪ್‌ ಪ್ರದೇಶದ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ ಬುಧವಾರ ವಿಜಯದಶಮಿ ಪ್ರಯುಕ್ತ ‘ಸೀಮೋಲ್ಲಂಘನೆ’ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಇಲ್ಲಿನ ಪಾಟೀಲ ಗಲ್ಲಿಯ ವತನದಾರ್‌ ಪಾಟೀಲ(ಪೊಲೀಸ್‌ಪಾಟೀಲ) ಮನೆತನದ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳನ್ನು ಪೂರೈಸಲಾಯಿತು. ಬೆಳಗಾವಿ ಮಾತ್ರವಲ್ಲದೆ; ನೆರೆಯ ಮಹಾರಾಷ್ಟ್ರ ಹಾಗೂ ಗೋವಾದಿಂದ ಬಂದಿದ್ದ ಸಾವಿರಾರು ಜನರೂ ಸಾಕ್ಷಿಯಾದರು.

ಚವಾಟ್‌ ಗಲ್ಲಿಯ ಜ್ಯೋತಿಬಾ ಮಂದಿರದಿಂದ ಆರಂಭಗೊಂಡ ಪಲ್ಲಕ್ಕಿ ಹಾಗೂ ಅಲಂಕೃತ ಎತ್ತಿನ ಮೆರವಣಿಗೆ, ಗಣಪತ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್‌ ರಸ್ತೆ ಮಾರ್ಗವಾಗಿ ಸಂಚರಿಸಿ ಹುತಾತ್ಮ ಚೌಕ್‌ ತಲುಪಿತು. ಅಲ್ಲಿ ವಿವಿಧ ದೇವಸ್ಥಾನಗಳ 11 ಪಲ್ಲಕ್ಕಿಗಳು ಸಮಾವೇಶಗೊಂಡು, ಮೆರವಣಿಗೆ ಮೂಲಕ ವಿದ್ಯಾನಿಕೇತನ ಮೈದಾನಕ್ಕೆ ತೆರಳಿದವು. ಯುವಕ–ಯುವತಿಯರು, ಮಕ್ಕಳ ಜೈಕಾರ ಮುಗಿಲು ಮುಟ್ಟಿದ್ದವು. ಅಲ್ಲಿ ಧಾರ್ಮಿಕ ಆಚರಣೆ ಕೈಗೊಂಡ ನಂತರ, ಬನ್ನಿ ಮುಡಿದು ದಸರಾ ಆಚರಣೆಗೆ ತೆರೆ ಎಳೆದರು.

ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ನಗರ ಪೊಲೀಸ್‌ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಉಪ ಆಯುಕ್ತ ರವೀಂದ್ರ ಗದಾಡಿ, ವತನದಾರ್‌ ಪಾಟೀಲ ಮನೆತನದ ರಂಜೀತ್‌ ಚವ್ಹಾಣಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.