ADVERTISEMENT

ಬೆಳಗಾವಿ | ಡಿಸಿಸಿ ಬ್ಯಾಂಕ್ ಚುನಾವಣೆ: ಕುತೂಹಲ ಘಟ್ಟಕ್ಕೆ ಕಿತ್ತೂರು ಕ್ಷೇತ್ರ

ಪ್ರದೀಪ ಮೇಲಿನಮನಿ
Published 18 ಅಕ್ಟೋಬರ್ 2025, 2:46 IST
Last Updated 18 ಅಕ್ಟೋಬರ್ 2025, 2:46 IST
ವಿಕ್ರಮ್ ಇನಾಮದಾರ
ವಿಕ್ರಮ್ ಇನಾಮದಾರ   

ಚನ್ನಮ್ಮನ ಕಿತ್ತೂರು: ಬೆಳಗಾವಿ ಮಧ್ಯವರ್ತಿ ಸಹಕಾರ (ಡಿಸಿಸಿ)ಬ್ಯಾಂಕಿಗೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತದಾನ ಮಾಡುವ ಹಕ್ಕನ್ನು ಧಾರವಾಡ ಹೈಕೋರ್ಟ್ ಪೀಠದಿಂದ ಹೊಸ ಕಾದರವಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕ್ ಪಡೆದುಕೊಂಡಿದೆ. ಇದರಿಂದಾಗಿ ಈ ತಾಲ್ಲೂಕು ಯಾರು ಪ್ರತಿನಿಧಿಸಬಹುದು ಎಂಬ ವಿಷಯವು ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದೆ.

ಮಾಜಿ ಸಚಿವ ದಿವಂಗತ ಡಿ.ಬಿ. ಇನಾಮದಾರ ಪುತ್ರ, ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಕ್ರಮ್ ಇನಾಮದಾರ ಅವರಿಗೆ 15 ಸೊಸೈಟಿಗಳು ಬೆಂಬಲಿಸಿವೆ. ಶಾಸಕ ಬಾಬಾಸಾಹೇಬ ಪಾಟೀಲ ಸಹೋದರ, ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿ ನಾನಾಸಾಹೇಬ ಪಾಟೀಲ ಅವರಿಗೆ 14 ಸೊಸೈಟಿಗಳು ಬಹಿರಂಗ ಬೆಂಬಲ ಸೂಚಿಸಿವೆ ಎಂದು ಅವರ ಬೆಂಬಲಿಗರು ತಿಳಿಸುತ್ತಾರೆ.

ಆದರೆ, ಹೈಕೋರ್ಟ್ ಆದೇಶದಿಂದ ಕಾಂಗ್ರೆಸ್ ಪಕ್ಷ ಬೆಂಬಲಿಸುವ ಸಂಘಕ್ಕೆ ಮತಹಕ್ಕು ದೊರಕಿದ್ದು, ಎರಡೂ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಸಮಬಲ ಪ್ರದರ್ಶಿಸುವುದು ಬಹುತೇಕ ಖಚಿತವಾದಂತಾಗಿದೆ ಎಂದು ಎರಡೂ ಪಕ್ಷ ಬೆಂಬಲಿಗರು ವಿಶ್ಲೇಷಿಸುತ್ತಾರೆ.

ADVERTISEMENT

ಇಬ್ಬರಿಗೂ ಸಮ ಮತಗಳು ಚಲಾವಣೆ ಆದರೆ ಅದೃಷ್ಟ ಯಾರು ಕೈ ಹಿಡಿಯುತ್ತದೆ ಎಂಬುದು ಸದ್ಯ ಸಾರ್ವಜನಿಕರ ಕುತೂಹಲವನ್ನು ಹೆಚ್ಚಿಸಿದೆ.

ಏನಿದು ಪ್ರಕರಣ: ಮಾರ್ಚ್ 31ಕ್ಕೆ ಹೊಸ ಕಾದರವಳ್ಳಿ ಸೊಸೈಟಿ ತುಂಬಬೇಕಿರುವ ಅಸಲು, ಬಡ್ಡಿ ಸೇರಿ ಅಂದಾಜು ₹24 ಲಕ್ಷ ಸಾಲವನ್ನು ಬಾಕಿ ಉಳಿಸಿಕೊಂಡಿತ್ತು. ಈ ಬಾಕಿ ಸಾಲದ ಮೊತ್ತವನ್ನು ಸೆ. 19 ರೊಳಗೆ ಪಾವತಿ ಮಾಡಿದರೆ ಮತದಾನದ ಹಕ್ಕು ದೊರಕುತ್ತದೆ ಎಂದು ಸೊಸೈಟಿಗೆ ನೀಡಿರುವ ನೋಟಿಸಿನಲ್ಲಿ ಡಿಸಿಸಿ ಬ್ಯಾಂಕ್ ಅಧಿಕಾರಿ ವರ್ಗ ತಿಳಿಸಿತ್ತು. ಸೆ.1ಕ್ಕೆ ಎಲ್ಲ ಸಾಲವನ್ನು ಸೊಸೈಟಿ ಪಾವತಿ ಮಾಡಿತ್ತು. ಅವಧಿಪೂರ್ವ ಸಾಲ ಪಾವತಿ ಮಾಡಿದ್ದರೂ ಮತದಾನ ಹಕ್ಕು ನಿರಾಕರಿಸಲಾಗಿತ್ತು. ಧಾರವಾಡ ಹೈಕೋರ್ಟ್ ಪೀಠದಲ್ಲಿ ಈ ಬಗ್ಗೆ ಪ್ರಶ್ನಿಸಿ ಮತಹಕ್ಕು ನೀಡಬೇಕು ಎಂದು ಪ್ರಕರಣ ದಾಖಲಿಸಲಾಗಿತ್ತು ಎಂದು ಕಾಂಗ್ರೆಸ್ ಮುಖಂಡ ಆಷ್ಪಾಕ್ ಹವಾಲ್ದಾರ್ ತಿಳಿಸಿದರು.

ನಾನಾಸಾಹೇಬ ಪಾಟೀಲ

‘ಫಲಿತಾಂಶ ಘೋಷಣೆ ಮಾಡುವಂತಿಲ್ಲ’

ಅ. 19 ರಂದು ನಡೆಯಲಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೊಸ ಕಾದರವಳ್ಳಿ ಸೊಸೈಟಿಗೆ ಮತದಾನ ಮಾಡುವ ಹಕ್ಕು ನೀಡಿರುವ ಹೈಕೋರ್ಟ್ ಈ ಮತವನ್ನು ಸೀಲ್ ಮಾಡಿರುವ ಲಕೋಟಿಯಲ್ಲಿ ಭದ್ರವಾಗಿಡುವಂತೆ ಸೂಚಿಸಿ ಪ್ರಕರಣವನ್ನು ಅ. 28 ಕ್ಕೆ ಮುಂದೂಡಿದೆ. ಮುಂದಿನ ವಿಚಾರಣೆ ಕಾಲಕ್ಕೆ ಈ ಪ್ರಕರಣ ಕುರಿತು ಅಂತಿಮ ತೀರ್ಮಾನ ಹೈಕೋರ್ಟ್ ಪ್ರಕಟಿಸಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.