
ಚಿಕ್ಕೋಡಿ: ಪಟ್ಟಣದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರ ಕಚೇರಿಗೆ (ಡಿಡಿಪಿಐ) ಇದೇ ಜ. 25ಕ್ಕೆ ಭರ್ತಿ 25 ವಸಂತಗಳು ತುಂಬುತ್ತವೆ. ಎರಡೂವರೆ ದಶಕ ಗತಿಸಿದರೂ ಡಿಡಿಪಿಐ ಕಚೇರಿಯಲ್ಲಿ ಇನ್ನೂ ಹತ್ತು ಹಲವು ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
2001 ಜ.25ರಂದು ಕಾರ್ಯಾರಂಭ ಮಾಡುವ ಮೂಲಕ ಚಿಕ್ಕೋಡಿಗೆ ಶೈಕ್ಷಣಿಕ ಜಿಲ್ಲೆಯ ಪಟ್ಟ ಲಭಿಸಿತ್ತು. ಅಖಂಡ ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ 25 ವರ್ಷಗಳ ಹಿಂದೆ ಸಹಸ್ರಾರು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ನಿರ್ವಹಣೆ ಮಾಡುವ ತೊಂದರೆಯಾಗುತ್ತಿತ್ತು. ಹೀಗಾಗಿ ಅಂದಿನ ಕೆಪಿಸಿಸಿ ಅಧ್ಯಕ್ಷ ವಿ.ಎಸ್. ಕೌಜಲಗಿ ಅವರ ಮನವಿಯ ಮೇರೆಗೆ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಶಿಕ್ಷಣ ಸಚಿವರಾಗಿದ್ದ ಎಚ್/ವಿಶ್ವನಾಥ ಪ್ರಯತ್ನದಿಂದ ಪಟ್ಟಣದಲ್ಲಿ ಡಿಡಿಪಿಐ ಕಚೇರಿಯನ್ನು ತೆರೆಯಲಾಯಿತು.
ಪಟ್ಟಣದ ಹೃದಯಭಾಗದಲ್ಲಿಯ ಶಾಸಕರ ಮಾದರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಕೆಲವೊಂದಿಷ್ಟು ಕೊಠಡಿಗಳನ್ನು ಬಳಸಿಕೊಂಡು 16 ವರ್ಷಗಳ ಕಾಲ ಡಿಡಿಪಿಐ ಕಚೇರಿ ಕಾರ್ಯನಿರ್ವಹಣೆ ಮಾಡಿತು. ₹1.5 ಕೋಟಿ ಮೊತ್ತದಲ್ಲಿ ಎರಡು ಎಕರೆ ಜಾಗೆಯಲ್ಲಿ ತಲೆ ಎತ್ತಿ ನಿಂತ ನೂತನ ಕಟ್ಟಡಕ್ಕೆ 2017ರಲ್ಲಿ ಸ್ಥಳಾಂತರಿಸಲಾಯಿತು. ಕಳೆದ 9 ವರ್ಷಗಳಿಂದ ಹೊಸ ಕಟ್ಟಡದಲ್ಲಿ ಉಪ ನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿದ್ದರೂ ಇನ್ನು ಹಲವು ಸೌಲಭ್ಯಗಳ ಕೊರತೆ ಎದುರಿಸುತ್ತಿದೆ.
ಎರಡು ಅಂತಸ್ತಿನ ಕಟ್ಟಡ ಹೊಂದಿದ ನೂತನ ಡಿಡಿಪಿಐ ಕಚೇರಿಯಲ್ಲಿ ಕಳೆದ 9 ವರ್ಷಗಳಿಂದ ಡಿಡಿಪಿಯು ಕಚೇರಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಸರ್ವ ಶಿಕ್ಷಣ ಅಭಿಯಾನ ವಿಭಾಗ ನಿರ್ವಹಣೆ ಮಾಡಲು ಜಾಗೆಯೇ ಇಲ್ಲದಂತಾಗಿದೆ. ಇನ್ನು, ಸಾರ್ವಜನಿಕರ ಹಾಗೂ ಸಿಬ್ಬಂದಿ ಬಳಕೆಗೆ ಶೌಚಾಲಯಗಳ ಕೊರತೆ ಇದೆ. ನೂತನ ಕಟ್ಟಡ ನಿರ್ಮಾಣವಾಗಿ 9 ವರ್ಷ ಕಳೆದರೂ ಸುತ್ತಲೂ ಕಾಂಪೌಂಡ್ ಇಲ್ಲ.
ಕಚೇರಿ ಆವರಣದಲ್ಲಿ ಸುರಕ್ಷತೆ ಹಾಗೂ ಸೌಂದರ್ಯೀಕರಣ ಮಾಡುವುದು ಸವಾಲಾಗಿ ಪರಿಣಮಿಸಿದೆ. ಮಹಿಳಾ ಸಿಬ್ಬಂದಿ ವಿಶ್ರಾಂತಿ ಪಡೆಯಲು ವಿಶ್ರಾಂತಿ ಗೃಹದ ಅವಶ್ಯಕತೆ ಇದೆ. ಕಚೇರಿಯ ಕಡಗತಗಳನ್ನು ಸಂಗ್ರಹಿಸಿಡಲು ಅಭಿಲೇಖಾಲಯ ಇಲ್ಲದಿರುವುದರಿಂದ ದಾಖಲೆಗಳನ್ನು ರಕ್ಷಣೆ ಮಾಡುವುದು ಕಷ್ಟವಾಗುತ್ತಿದೆ. ಪಟ್ಟಣದಿಂದ ಕಚೇರಿ 3ರಿಂದ 4 ಕಿ.ಮೀ ದೂರ ಇರುವುದರಿಂದ ಕಚೇರಿಯ ಸಿಬ್ಬಂದಿಗೆ ವಸತಿ ಸಮುಚ್ಛಯದ ಅವಶ್ಯಕತೆ ಇದೆ. ಹೋಗಲು ಬರಲು ಬಸ್ಸಿನ ಸೌಕರ್ಯ ಇಲ್ಲದಾಗಿದೆ. ಹೀಗೆ ಹಲವು ಸೌಲಭ್ಯಗಳನ್ನು ಒದಗಿಸಿಕೊಟ್ಟಲ್ಲಿ ಕಚೇರಿಯ ಸಿಬ್ಬಂದಿ ಇನ್ನೂ ಉತ್ತಮವಾಗಿರುವ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.
ಹಾಲಿ ಡಿಡಿಪಿಐ ಆರ್.ಎಸ್. ಸೀತಾರಾಮು ಸೇರಿದಂತೆ 27 ಜನ ಡಿಡಿಪಿಐ ಕಾರ್ಯನಿರ್ವಹಿಸಿದ್ದಾರೆ. ಶ್ರೀಮತಿ ಎಸ್.ಡಿ. ಬಾಗೇವಾಡಿ ಮೊದಲ ಡಿಡಿಪಿಐ. ಗಜಾನನ ಮನ್ನಿಕೇರಿ ಹೆಚ್ಚು ಸಮಯ ಈ ಹುದ್ದೆಯಲ್ಲಿದ್ದರು.
8 ಜನ ಪ್ರಭಾರ ಹುದ್ದೆ ನಿರ್ವಹಿಸಿದ್ದು, ಎರಡು ಭಾರಿ ಡಿಡಿಪಿಐಗಳಾಗಿ ಬಿ.ಆರ್. ಗಂಪ್ಪನವರ, ಕೆ.ಸಿ. ಕೃಷ್ಣಶೆಟ್ಟಿ, ಗಜಾನನ ಮನ್ನಿಕೇರಿ, ಎಂ.ಎಲ್. ಹಂಚಾಟೆ, ಎ.ಸಿ. ಗಂಗಾಧರ (ಪ್ರಭಾರಿ) ಕಾರ್ಯನಿರ್ವಹಿಸಿದ್ದಾರೆ. ಬೆಳ್ಳಿಹಬ್ಬದ ಹೊಸ್ತಿಲಲ್ಲಿ ಇರುವ ಈ ಕಚೇರಿ ಜೊತೆ ಜೊತೆಗೆ ಕಾಗವಾಡ ಹಾಗೂ ಮೂಡಲಗಿ ಶಿಕ್ಷಣ ವಲಯಗಳು ಕಾರ್ಯಾರಂಭ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.