ADVERTISEMENT

‘ಶಿವು ಸಾವಿನ ತನಿಖೆ ಸಿಬಿಐಗೆ ವಹಿಸಿ’

8ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 13:53 IST
Last Updated 4 ಜುಲೈ 2019, 13:53 IST

ಬೆಳಗಾವಿ: ‘ಗೋರಕ್ಷಕ ಶಿವು ಉಪ್ಪಾರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಜು.8ರಂದು ವಿವಿಧ ಹಿಂದೂಪರ ಸಂಘಟನೆಗಳಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರೂ ಕೂಡ ಈವರೆಗೂ ಸ್ಪಷ್ಟ ತನಿಖೆ ಆಗಿಲ್ಲ. ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳ ಮೇಲೆ ಸರ್ಕಾರದ ಒತ್ತಡವಿದ್ದು,ಆತ್ಮಹತ್ಯೆಯ ಹೆಸರಲ್ಲಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ’ ಎಂದು ಆರೋಪಿಸಿದರು.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ:ಅನುಮಾಸ್ಪದ ಸಾವಿನ ಬಗ್ಗೆ ಬಿಜೆಪಿಯ ಶಾಸಕರು ಹಾಗೂ ಸಂಸದರು ಧ್ವನಿ ಎತ್ತದೇ ಇರುವುದು ಖಂಡನೀಯ. ಪ್ರತಿಭಟನೆಯಲ್ಲಿ ಬಿಜೆಪಿಯ ಜನಪ್ರತಿನಿಧಿಗಳು ಭಾಗವಹಿಸಬೇಕು. ಇಲ್ಲದಿದ್ದರೇ ಅವರ ಮನೆಗಳಲ್ಲಿ ದನ–ಕರುಗಳನ್ನು ಬಿಟ್ಟು, ಶಿವು ಪಾಲಕರ ಸಮೇತ ಮನೆಗಳ ಎದುರು ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

‘ಅನ್ಯ ಧರ್ಮಗಳ ವ್ಯಕ್ತಿಯ ಹತ್ಯೆ ನಡೆದರೆ ದೇಶಾದ್ಯಂತ ಬೊಬ್ಬೆ ಹೊಡೆಯಲಾಗುತ್ತದೆ. ಆದರೆ, ಹಿಂದೂ ಕಾರ್ಯಕರ್ತರ ಹತ್ಯೆಯಾದರೇ ಈ ಬಗ್ಗೆ ಯಾರು ಮಾತನಾಡುವುದಿಲ್ಲ. ಶಿವು ಉಪ್ಪಾರ ಮೊಬೈಲ್ ವಿಡಿಯೊ-ಆಡಿಯೋ ಸಾಕ್ಷ್ಯ ಲಭ್ಯವಿದ್ದರೂ ಸರ್ಕಾರ ಅದನ್ನು ಪರಿಗಣಿಸಿಲ್ಲ. ಫೇಸಬುಕ್‌ ಲೈವ್‌ ವಿಡಿಯೋದಲ್ಲಿ ಶಿವು ಉಲ್ಲೇಖಿಸಿರುವ ಆರೋಪಿಗಳನ್ನು ಪೊಲೀಸರು ಈವರೆಗೂ ಬಂಧಿಸಿಲ್ಲ. ಆರೋಪಿಗಳನ್ನುಕೂಡಲೇ ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಗೋವನ್ನು ರಾಷ್ಟ್ರಪ್ರಾಣಿಯಾಗಿ ಘೋಷಿಸಿ: ‘ಕ್ರೂರ ಮೃಗವಾಗಿರುವ ಹುಲಿಯನ್ನು ರಾಷ್ಟ್ರಪ್ರಾಣಿಯಾಗಿ ಘೋಷಿಸಿರುವ ಕಾರಣ ನನಗೆ ತಿಳಿದಿಲ್ಲ. ಅದರ ಬದಲು ಕೃಷಿ ಪ್ರಧಾನ ದೇಶದ ಸಂಕೇತವಾದ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಸಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರಕ್ಕೆ ದೇಶದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡುವ ಮನಸ್ಸಿಲ್ಲ. ಹೀಗಾಗಿ, ದೇಶದ ಉದ್ದಗಲಕ್ಕೂ ಗೋವುಗಳ ಕಳ್ಳಸಾಗಣೆ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದೆ. ಕೂಡಲೇ, ಗೋ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವಿನಯ ಅಂಗ್ರೊಳಿ, ಹಿಂದೂ ಜನಜಾಗೃತಿ ಸಮಿತಿ ಮುಖಂಡ ಅಂಜೇಶ ಕನಗ್ಲೇಕರ್,ಜಗತಚಂದ್ರ ಜೈನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.