ಬೈಲಹೊಂಗಲ: ರೈತರಿಗೆ ಬಿತ್ತನೆಗಾಗಿ ಸೋಯಾಬಿನ್ ಬೀಜ ವಿತರಿಸುವಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ನೇಗಿಲ ಯೋಗಿ ರೈತ ಸಂಘ ಜಿಲ್ಲಾ ಘಟಕದಿಂದ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ನೇಗಿಲ ಯೋಗಿ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರ ಬೋಳನ್ನವರ ಮಾತನಾಡಿ, ಮುಂಗಾರು ಹಂಗಾಮು ಪ್ರಾರಂಭವಾಗಿ ಒಂದು ವಾರ ಕಳೆದಿದೆ. ತಾಲೂಕಿನಲ್ಲಿ ರೈತರು ತಮ್ಮ ಹೊಲವನ್ನು ಹದ ಮಾಡಿ, ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ ಕೃಷಿ ಇಲಾಖೆಯಿಂದ ರೈತರಿಗೆ ಇನ್ನೂವರೆಗೂ ಯಾವುದೇ ಬೀಜ, ಗೊಬ್ಬರ ವಿತರಿಸದಿರುವುದು ವಿಪರ್ಯಾಸ.
ರೈತರಿಗೆ ಅವಶ್ಯವಿರುವ ಸೋಯಾಬಿನ್, ಗೊಂಜಾಳ, ಹೆಸರು ಬಿತ್ತನೆ ಬೀಜಗಳನ್ನು ಗುಣಮಟ್ಟದ ಹಾಗೂ ಯೋಗ್ಯ ದರದಲ್ಲಿ ರೈತರಿಗೆ ವಿತರಿಸಲು ಕ್ರಮ ಜರುಗಿಸಬೇಕು. ಒಂದು ವೇಳೆ ರೈತರಿಗೆ ಬೀಜ, ಗೊಬ್ಬರ ವಿತರಿಸುವಲ್ಲಿ ವಿಳಂಬ ಮಾಡಿದರೆ, ಕೃಷಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಮನವಿ ಸ್ವೀಕರಿಸಿ, ಎರಡು ದಿನದಲ್ಲಿ ಸೋಯಾಬಿನ್ ಬೀಜ ಹಾಗೂ ಗೊಬ್ಬರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ನೇಗಿಲ ಯೋಗಿ ರೈತ ಸಂಘದ ಸದಸ್ಯರಾದ ಅನೀಲ ಗೀರನ್ನವರ, ಮಹಾಂತೇಶ ಬೋಳನ್ನವರ, ಶಿವಪ್ಪ ಲಿಂಬೆನ್ನವರ, ಶಂಕರಗೌಡ ಪಾಟೀಲ, ಬಸಪ್ಪ ಜಂಬಗಿ, ಬಾಬಣ್ಣಾ ಸಂಗೊಳ್ಳಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.