ADVERTISEMENT

ಬೈಲಹೊಂಗಲ‌: ಸಂತಿ ರಸ್ತೆ ಅತಿಕ್ರಮಣ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:12 IST
Last Updated 16 ಜೂನ್ 2025, 14:12 IST
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಅವರಿಗೆ ಹೊಸೂರ ಗ್ರಾಮದ ರೈತರು ಸೋಮವಾರ ಮನವಿ ಸಲ್ಲಿಸಿದರು
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಅವರಿಗೆ ಹೊಸೂರ ಗ್ರಾಮದ ರೈತರು ಸೋಮವಾರ ಮನವಿ ಸಲ್ಲಿಸಿದರು   

ಬೈಲಹೊಂಗಲ‌: ಸಮೀಪದ ಹೊಸೂರ ಗ್ರಾಮದಿಂದ‌ ಬೈಲಹೊಂಗಲ ಪಟ್ಟಣಕ್ಕೆ ಸಂಪರ್ಕಿಸುವ ಹಳೆಯ ಸಂತಿ ರಸ್ತೆಯ ಅತಿಕ್ರಮಣ ತೆರವುಗೊಳಿಸಿ ರಸ್ತೆಯ ಹದ್ದುಬಸ್ತು ಗುರುತಿಸುವಂತೆ ಆಗ್ರಹಿಸಿ ಗ್ರಾಮದ ರೈತರು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಗ್ರಾಮದ ರೈತ ಮುಖಂಡರಾದ ಮಡಿವಾಳಪ್ಪ ಬೂದಿಹಾಳ, ಬಸವರಾಜ ದುಗ್ಗಾಣಿ, ಮಹಾದೇವಪ್ಪ ಕಮತಗಿ ಮಾತನಾಡಿ, ‘ಹೊಸೂರ ಗ್ರಾಮದಿಂದ‌ ಬೈಲಹೊಂಗಲ, ಆನಿಗೋಳ, ವಕ್ಕುಂದ ಗ್ರಾಮಕ್ಕೆ ಹಾಗೂ ನೂರಾರೂ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಹಳೆ ಬೈಲಹೊಂಗಲ ರಸ್ತೆ (ಸಂತಿ ರಸ್ತೆ) ಸರಿ ಸುಮಾರು 33 ಅಡಿ ಅಗಲ ಹೊಂದಿದೆ. ಈ ರಸ್ತೆ ಇಂದು ಅತಿಕ್ರಮಣವಾಗಿ ವಾಹನ, ಚಕ್ಕಡಿ, ದನಕರು ಚಲನವಲನಕ್ಕೆ ಹಾಗೂ ರೈತರ ಕೃಷಿ ಚಟುವಟಿಕೆಗೆ ಅತ್ಯಂತ ತೊಂದರೆಯಾಗಿದೆ. ರಸ್ತೆ ಬದಿಯ ಗಟಾರು ಮುಚ್ಚಿದ್ದರಿಂದ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ರಸ್ತೆಯ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ತಾಲ್ಲೂಕು ಸರ್ವೆ ಕಚೇರಿಯ ದಾಖಲೆಗಳಲ್ಲಿರುವ ಅಳತೆಯ ಪ್ರಕಾರ ತಕ್ಷಣ ಈ ರಸ್ತೆಯ ಅಗಲ ಮತ್ತು ನಕ್ಷೆಯ ಪ್ರಕಾರ ಇದು ಇರುವ ಅಸ್ತಿತ್ವವನ್ನು ಗುರುತಿಸಿ ಹದ್ದುಬಸ್ತು ಮಾಡಿ ರಸ್ತೆ ಅಭಿವೃದ್ಧಿಗೊಳಿಸಬೇಕು. ವಿಳಂಬವಾದರೆ ರೈತರು ತೀವ್ರವಾಗಿ ಹೋರಾಟ ಮಾಡಬೇಕಾಗುತ್ತದೆ’ ಎಂದರು‌.

ಉಪವಿಭಾಗಧಿಕಾರಿ ಪ್ರಭಾವತಿ ಫಕೀರಪುರ ಮನವಿ ಸ್ವೀಕರಿಸಿ, ರಸ್ತೆಯ ಸರ್ವೆ ಕಾರ್ಯ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ರೈತ ಮುಖಂಡರಾದ ಮಲ್ಲಿಕಾರ್ಜುನ ಕರಡಿಗುದ್ದಿ, ಶ್ರೀಶೈಲ ಪಣದಿ, ಮಹಾಂತೇಶ ಹುರಕಡ್ಲಿ, ಬಸವರಾಜ ಮೂಗಬಸವ, ನಾಗಪ್ಪ ಹೊಸಮನಿ, ಯಲ್ಲಪ್ಪ ಮೂಗಬಸವ, ಈರಪ್ಪ ಚಿಕ್ಕೊಪ್ಪ, ಮಹಾದೇವಪ್ಪ ಗೌಡರ, ಶಿವಬಸ್ಸಪ್ಪ ಬುಡಶೆಟ್ಟಿ, ಮಹಾದೇವ ಅಪೋಜಿ, ಮೂರಾದಲಿ ಜಮಾದಾರ, ಮಡಿವಾಳಪ್ಪ ಚಿಕ್ಕೊಪ್ಪ, ಮಡಿವಾಳಪ್ಪ ಕಮತಗಿ, ಮಡಿವಾಳಪ್ಪ ಜೋಬಾಳಿ‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.