ADVERTISEMENT

ಸೇವಾ ಭದ್ರತೆಗೆ ಅತಿಥಿ ಉಪನ್ಯಾಸಕರ ಆಗ್ರಹ

ಪ್ರಸ್ತುತ ಅಧಿವೇಶನದಲ್ಲೆ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 12:44 IST
Last Updated 19 ಸೆಪ್ಟೆಂಬರ್ 2021, 12:44 IST

ಬೆಳಗಾವಿ: ‘ಸರ್ಕಾರಿ ಪದವಿ ಕಾಲೇಜುಗಳಲ್ಲಿ 10–15 ವರ್ಷಗಳಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ನಡೆದಿರುವ ವಿಧಾನಮಂಡಲ ಅಧಿವೇಶನದಲ್ಲಿಯೇ ಸೇವಾ ಭದ್ರತೆ ಘೋಷಿಸಬೇಕು’ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜು ಕಂಬಾರ ಒತ್ತಾಯಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಅವರು ಮಾತನಾಡಿದರು.

‘430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಸೇವಾ ಭದ್ರತೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೆ, ಇದುವರೆಗೂ ಸೇವಾ ಭದ್ರತೆಯನ್ನು ಘೋಷಿಸಿಲ್ಲ. ಪರಿಣಾಮ, ನಮ್ಮ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಕೆಲವರ ವಯೋಮಿತಿ ಮೀರಿದೆ. ಸರ್ಕಾರವು ಇಂದಲ್ಲ ನಾಳೆ ನಮ್ಮನ್ನು ಕಾಯಂಗೊಳಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಅತಿಥಿ ಉಪನ್ಯಾಸಕರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ನಡೆಯುತ್ತಿದ್ದು, ಅವರಿಗೂ ಸೇವಾ ಭದ್ರತೆ ನೀಡಲು ಸರ್ಕಾರ ಯೋಚಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಸ್ವಾಗತಿಸುತ್ತೇವೆ. ಅವರ ಹೇಳಿಕೆಯು, ಅತಿಥಿ ಉಪನ್ಯಾಸಕರಲ್ಲಿ ಆಶಾಭಾವ ಮೂಡಿಸಿದೆ. ಆಧುನಿಕ ಜೀತ ಪದ್ಧತಿಯಿಂದ ನಮಗೆ ಮುಕ್ತಿ ನೀಡಲು ಮುಖ್ಯಮಂತ್ರಿ ಕೂಡಲೇ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಬೇಡಿಕೆ ಬಗ್ಗೆ ವಿಧಾನಪರಿಷತ್‌ ಸದಸ್ಯರು ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು’ ಎಂದು ಕೋರಿದರು.

ಪ್ರಧಾನ ಕಾರ್ಯದರ್ಶಿಗಳಾದ ವಿಠ್ಠಲ ಮಾಳವದೆ, ನಿಂಗಪ್ಪ ಸಂಗ್ರೇಜಿಕೊಪ್ಪ, ಉಪಾಧ್ಯಕ್ಷೆ ಜಯಶ್ರೀ ಹಂಚಿನಮನಿ, ರಾಜ್ಯ ಘಟಕದ ಉಪಾಧ್ಯಕ್ಷ ರವಿ ಮೆಟಗೇರಿ. ಖಜಾಂಚಿ ಡಾ.ಅಡಿವೆಪ್ಪ ಇಟಗಿ, ಸದಸ್ಯರಾದ ಕೆ.ಎನ್. ಕಾಂಬಳೆ, ನೀಲಕಂಠ ಭೂಮನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.