ADVERTISEMENT

ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿ; ಕಾರಂಜಾ ಜಲಾಶಯ ಸಂತ್ರಸ್ತರ ಧರಣಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 12:42 IST
Last Updated 13 ಡಿಸೆಂಬರ್ 2018, 12:42 IST
ಕಾರಂಜಾ ಜಲಾಶಯ ಸಂತ್ರಸ್ತರು ಗುರುವಾರ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಧರಣಿ ನಡೆಸಿದರು
ಕಾರಂಜಾ ಜಲಾಶಯ ಸಂತ್ರಸ್ತರು ಗುರುವಾರ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಧರಣಿ ನಡೆಸಿದರು   

ಬೆಳಗಾವಿ: ಕಾರಂಜಾ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡವರಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಆಗ್ರಹಿಸಿ ಬೀದರ್‌ನ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಸದಸ್ಯರು ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಧರಣಿ ನಡೆಸಿದರು.

‘ಜಲಾಶಯ ನಿರ್ಮಿಸಿದ್ದರಿಂದ ಹೊಲ ಹಾಗೂ ಮನೆಗಳನ್ನು ಕಳೆದುಕೊಂಡವರಿಗೆ ಸರಿಯಾದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಈಚೆಗೆ 71 ದಿನಗಳವರೆಗೆ ಬೀದರ್ ಜಿಲ್ಲಾಧಿಕಾರಿ ಕಚೇರಿ ಬಳಿ ಸತತವಾಗಿ ಧರಣಿ ನಡೆಸಿದ್ದೆವು. ಇದಕ್ಕೆ ಸ್ಪಂದಿಸಿದ ಸರ್ಕಾರ ಪ್ರತಿನಿಧಿಗಳನ್ನು ಆಹ್ವಾನಿಸಿ ಬೆಂಗಳೂರಿನಲ್ಲಿ ಸಭೆ ನಡೆಸಿತ್ತು. ವಿಧಾನಸಭೆ ಉಪ ಚುನಾವಣೆ ಮಾದರಿ ನೀತಿಸಂಹಿತೆ ಮುಕ್ತಾಯಗೊಂಡ ನಂತರ, ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಹೀಗಾಗಿ, ಅಹೋರಾತ್ರಿ ಧರಣಿಯನ್ನು ಕೈಬಿಡಲಾಗಿತ್ತು. ಆದರೆ, ಒಂದೂವರೆ ತಿಂಗಳಾದರೂ ಬೇಡಿಕೆಗಳು ಈಡೇರಿಲ್ಲ’ ಎಂದು ಧರಣಿನಿರತರು ದೂರಿದರು.

‘ನ್ಯಾಯಾಲಯ ಆದೇಶದ ಪ್ರಕಾರ ಎಕರೆಗೆ ₹ 88ಸಾವಿರ ಪರಿಹಾರವನ್ನು ಬಡ್ಡಿಸಮೇತವಾಗಿ ನೀಡಬೇಕು. ಚಳಿಗಾಲದ ಅಧಿವೇಶನದಲ್ಲಿಯೇ ಈ ಕುರಿತು ನಿರ್ಣಯ ಕೈಗೊಳ್ಳಬೇಕು. 28 ಹಳ್ಳಿಗಳ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ. ಬೀದರ್‌ ಬಂದ್ ಮಾಡಬೇಕಾಗುತ್ತದೆ. ಸಂತ್ರಸ್ತರು ಪ್ರಾಣ ತ್ಯಾಗ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಅಧ್ಯಕ್ಷ ಚಂದ್ರಶೇಖರ ಹೊಚಕನಹಳ್ಳಿ, ಕಾರ್ಯದರ್ಶಿ ನಾಗಶೆಟ್ಟಪ್ಪ ರೇಕುಳಗಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.