ADVERTISEMENT

ನಿರ್ಲಕ್ಷ್ಯಕ್ಕೊಳಗಾದ ಗಾಂಧೀಜಿ ಸ್ಮಾರಕ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 14:51 IST
Last Updated 1 ಅಕ್ಟೋಬರ್ 2021, 14:51 IST
ಎಂ.ಕೆ. ಹುಬ್ಬಳ್ಳಿಯಲ್ಲಿರುವ ಮಹಾತ್ಮ ಗಾಂಧೀಜಿ ಚಿತಾಭಸ್ಮ ಸ್ಮಾರಕ
ಎಂ.ಕೆ. ಹುಬ್ಬಳ್ಳಿಯಲ್ಲಿರುವ ಮಹಾತ್ಮ ಗಾಂಧೀಜಿ ಚಿತಾಭಸ್ಮ ಸ್ಮಾರಕ   

ಎಂ.ಕೆ. ಹುಬ್ಬಳ್ಳಿ: ಇಲ್ಲಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿರುವ ಮಹಾತ್ಮ ಗಾಂಧೀಜಿ ಚಿತಾಭಸ್ಮ ಸ್ಮಾರಕ ಅಭಿವೃದ್ಧಿಯಿಂದ ವಂಚಿತಗೊಂಡಿದೆ.

ಪ್ರತಿ ವರ್ಷ ಆ.15, ಅ.2 ಮತ್ತು ಜ.26ರಂದು ಮಾತ್ರ ಚಿತಾಭಸ್ಮ ಸ್ಮಾರಕಕ್ಕೆ ಸುಣ್ಣ-ಬಣ್ಣ ಬಳಿದು ಅಂದಗೊಳಿಸುವ ಸ್ಥಳೀಯ ಆಡಳಿತ, ಇಲ್ಲಿ ಉದ್ಯಾನ ಅಭಿವೃದ್ಧಿಪಡಿಸುವುದನ್ನು ಮರೆಯುತ್ತದೆ. ಇದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಮಾರಕದ ಬಳಿ ಉದ್ಯಾನ ಸೇರಿ ಅಗತ್ಯ ಅಭಿವೃದ್ಧಿ ಕಾರ್ಯಕ್ಕಾಗಿ ಹಲವು ಬಾರಿ ನಾಗರಿಕರು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಿಗೆ ತಿಳಿಸಿದರೂ ಸ್ಪಂದನೆ ದೊರೆತಿಲ್ಲ ಎಂಬ ಕೊರಗು ಇಲ್ಲಿನ ಜನರದ್ದು.

ADVERTISEMENT

ಗಾಂಧೀಜಿ ಅವರ ಚಿತಾಭಸ್ಮವನ್ನು ಬೆಳಗಾವಿ ಮೂಲಕ ಎಂ.ಕೆ. ಹುಬ್ಬಳ್ಳಿ ಮಾರ್ಗದಲ್ಲಿ ಗದಗಕ್ಕೆ ಒಯ್ಯಲಾಗುತ್ತಿತ್ತು. ಆಗ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರು ಒಂದಿಷ್ಟು ಚಿತಾಭಸ್ಮ ಪಡೆದು ಗ್ರಾಮದಲ್ಲಿ ಅವರ ನೆನಪು ಚಿರಸ್ಥಾಯಿಯಾಗಿರುವಂತೆ ಮಾಡಿದ್ದಾರೆ.

‘ಆಗ ನಾವು ಚಿಕ್ಕವರಿದ್ದೇವು. ಗಾಂಧೀಜಿ ಅವರ ಚಿತಾಭಸ್ಮ ಪಡೆದ ಹೆಮ್ಮೆ ನಮ್ಮೂರಿನದು’ ಎಂದು ಹಿರಿಯರಾದ ಎನ್.ಸಿ. ಗಣಾಚಾರಿ ಹೇಳಿದರು.

‘ಸ್ಮಾರಕದ ಬಳಿ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರ ಮತ್ತು ಪಟ್ಟಣ ಪಂಚಾಯ್ತಿ ಮುಂದಾಗಬೇಕು. ಶಾಂತಿವನ ನಿರ್ಮಿಸಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಿಸುವ ಜೊತೆಗೆ ಹೋರಾಟದ ಇತಿಹಾಸ ಸ್ಮರಿಸುವ ಕಾರ್ಯವಾಗಬೇಕು’ ಎನ್ನುತ್ತಾರೆ ಅವರು.

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಗಿನ ಆಡಳಿತ ಮಂಡಳಿ ಸ್ಮಾರಕ ನಿರ್ಮಿಸಿಕೊಟ್ಟಿದೆ. ಅದರ ಅಂದ ಹೆಚ್ಚಿಸಿ, ಸ್ವಾತಂತ್ರ್ಯ ಹೋರಾಟದ ಇತಿಹಾಸ ನೆನಪಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎನ್ನುವುದು ಅವರ ಸಲಹೆಯಾಗಿದೆ.

ಸ್ಮಾರಕದಲ್ಲಿದ್ದ ಗಾಂಧೀಜಿ ಪುತ್ಥಳಿಯ ಕನ್ನಡಕ ಭಗ್ನಗೊಂಡಿತ್ತು. ಪಟ್ಟಣ ಪಂಚಾಯ್ತಿಯವರು ಎರಡು ವರ್ಷಗಳ ಹಿಂದೆ ಹೊಸದಾಗಿ ಪುತ್ಥಳಿ ಪುನರ್‌ಪ್ರತಿಷ್ಠಾಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.