ADVERTISEMENT

ಕನ್ನಡ ಧ್ವಜಕ್ಕೆ ರಕ್ಷಣೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 16:14 IST
Last Updated 30 ಡಿಸೆಂಬರ್ 2020, 16:14 IST
ಭೀಮಪ್ಪ ಗಡಾದ
ಭೀಮಪ್ಪ ಗಡಾದ   

ಬೆಳಗಾವಿ: ‘ಇಲ್ಲಿನ ಮಹಾನಗರ ಪಾಲಿಕೆ ಎದುರಿಗೆ ಕನ್ನಡ ಪರ ಹೋರಾಟಗಾರರು ಸ್ಥಾಪಿಸಿರುವ ಧ್ವಜ ಸ್ತಂಭಕ್ಕೆ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕನ್ನಡ ಧ್ವಜವನ್ನು ರಾಷ್ಟ್ರ ಧ್ವಜಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಹಾರಿಸಲು ಕಾನೂನಿನಲ್ಲಿ ಯಾವುದೇ ತೊಡುಕು ಇಲ್ಲವೆಂದು ಹೈಕೋರ್ಟ್ ಅಡ್ವೊಕೇಟ್ ಜನರಲ್ 2016ರಂದು ಲಿಖಿತ ಅಭಿಪ್ರಾಯ ಕೊಟ್ಟಿದ್ದಾರೆ. ಇದಾದ ನಂತರ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯದಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ಕೊಟ್ಟಿದ್ದರು. ಇದಕ್ಕೆ ಸರ್ಕಾರದ ಕಾರ್ಯದರ್ಶಿ ಕೂಡ ಒಪ್ಪಿಗೆ ಸೂಚಿಸಿದ್ದರು. ಸರ್ಕಾರವೇ ಸಂಪೂರ್ಣವಾಗಿ ಒಪ್ಪಿಗೆ ಕೊಟ್ಟಿರುವ ಬಗ್ಗೆ ದಾಖಲೆಗಳಿವೆ’ ಎಂದು ಮಾಹಿತಿ ನೀಡಿದರು.

‘ಪಾಲಿಕೆ ಎದುರು ಧ್ವಜಸ್ತಂಭ ಸ್ಥಾಪಿಸುವ ಕೆಲಸವನ್ನು ಸರ್ಕಾರವೇ ಮಾಡಬೇಕಿತ್ತು. ಈಗ ಕನ್ನಡಪರ ಹೋರಾಟಗಾರರು ಮಾಡಿರುವುದಕ್ಕೆ ಪುರಸ್ಕಾರ ನೀಡಬೇಕು’ ಎಂದು ಕೋರಿದರು.

ADVERTISEMENT

‘ಯಳ್ಳೂರ ಗ್ರಾಮ ಕರ್ನಾಟಕದಲ್ಲಿದ್ದರೂ ಅಲ್ಲಿನವರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು ಎಂಬ ನಾಮಫಲಕವನ್ನು ಕಾನೂನು ಬಾಹಿರವಾಗಿ ಹಾಕಿಕೊಂಡಿದ್ದರು. ಸರ್ಕಾರಿ ಆದೇಶವಿಲ್ಲದೆಯೂ ಹಾಕಲಾಗಿದ್ದ ಕಲ್ಲಿನ ನಾಮಫಲಕವನ್ನು ಬೆಳಗಾವಿ ಪೊಲೀಸರು 20 ವರ್ಷಗಳವರೆಗೆ ಕಾದಿದ್ದರು. ಹೀಗಿರುವಾಗ ನಮ್ಮ ನಾಡಿನ‌ ಹೆಮ್ಮೆಯ ಪ್ರತೀಕವಾಗಿರುವ ಕನ್ನಡ ಧ್ವಜ ಹಾರಿಸಿರುವುದರಲ್ಲಿ ತಪ್ಪಿಲ್ಲ. ಹೀಗಾಗಿ, ಭದ್ರತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಧ್ವಜವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು. ತೆರವುಗೊಳಿಸಲು ಬಂದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.