ADVERTISEMENT

ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಲು ಆಗ್ರಹ

ಉತ್ಸವದಲ್ಲೇ ಘೋಷಣೆಗೆ ಮುಖ್ಯಮಂತ್ರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 7:17 IST
Last Updated 21 ಅಕ್ಟೋಬರ್ 2021, 7:17 IST
ಅಶೋಕ ಪೂಜಾರಿ
ಅಶೋಕ ಪೂಜಾರಿ   

ಬೆಳಗಾವಿ: ‘ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡಬೇಕು’ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದರು. ಅದೇ ಮಾದರಿಯಲ್ಲಿ ಈಗಿನ ಮುಖ್ಯಮಂತ್ರಿ ಹಾಗೂ ನಮ್ಮ ಭಾಗದವರೇ ಆಗಿರುವ ಬಸವರಾಜ ಬೊಮ್ಮಾಯಿ ಅವರೂ ಕ್ರಮ ಕೈಗೊಳ್ಳಬೇಕು. ಈ ಭಾಗಕ್ಕೆ ದಾಸ್ಯದ ಹೆಸರಿನಿಂದ ಮುಕ್ತಿ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಾಂದಿ ಹಾಡಿದ ಧೀರೆ. ಈ ಹಿನ್ನೆಲೆಯಲ್ಲಿ, ಕಿತ್ತೂರು ಕರ್ನಾಟಕ ಎಂದು ಕರೆಸಿಕೊಳ್ಳುವುದು ಸ್ವಾಭಿಮಾನದ ಹಾಗೂ ಸ್ವಾತಂತ್ರ್ಯದ ಸಂಕೇತವಾಗಿದೆ. ಮರುನಾಮಕರಣಕ್ಕಾಗಿ ಬಹಳ ಚರ್ಚೆ ನಡೆಸುವ ಅಗತ್ಯವಿಲ್ಲ. ಈ ಭಾಗದ ಜನರ ಹಲವು ವರ್ಷಗಳ ಒಕ್ಕೊರಲ ಬೇಡಿಕೆ ಇದಾಗಿದೆ. ಇದಕ್ಕೆ ಯಾರೂ ವಿರೋಧಿಸುವುದೂ ಇಲ್ಲ. ಅ.23ರಂದು ನಡೆಯುವ ಕಿತ್ತೂರು ಉತ್ಸವದಲ್ಲೇ ಘೋಷಿಸಬೇಕು’ ಎಂದು ಮುಖ್ಯಮಂತ್ರಿಯನ್ನು ಕೋರಿದರು.

‘ಕಿತ್ತೂರು ಕರ್ನಾಟಕ ಮರುನಾಮಕರಣ ಬಳಿಕ ವ್ಯಾಪ್ತಿಯ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆಂದು ಪ್ರಾಧಿಕಾರ ರಚಿಸಬೇಕು. ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಶಕ್ತಿಕೇಂದ್ರವನ್ನಾಗಿ ಮಾಡಬೇಕು. ಪ್ರಮುಖ ಸಚಿವಾಲಯದ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು. ಈ ಮೂಲಕ ಇಲ್ಲಿನ ಜನರ ಆಶೋತ್ತರಗಳನ್ನು ಈಡೇರಿಸಲು ಮುಖ್ಯಮಂತ್ರಿ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸೇರುತ್ತೇನೆ

‘ಕಾಂಗ್ರೆಸ್‌ ಸೇರುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನನ್ನೊಂದಿಗೆ ಚರ್ಚಿಸಿದ್ದರು. ಹಿತೈಷಿಗಳು, ಬೆಂಬಲಿಗರು ಹಾಗೂ ಹಿರಿಯರ ಸಲಹೆಯಂತೆ ನಾನೂ ಸಮ್ಮತಿ ನೀಡಿದ್ದೆ. ಆದರೆ, ಕಾರಣಾಂತರಗಳಿಂದ ಈವರೆಗೂ ಸೇರಲಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೂ ಇತ್ತೀಚೆಗೆ ಚರ್ಚಿಸಿದ್ದೇನೆ. ಇಲ್ಲಿನ ನಾಯಕರೇ ಆಗಿರುವ ಸತೀಶ ಜಾರಕಿಹೊಳಿ ಅವರ ಮೂಲಕ ದಿನಾಂಕ ನಿಗದಿಪಡಿಸಿ ಕಾರ್ಯಕ್ರಮ ಆಯೋಜಿಸಿದರೆ ಅಂದು ಬಂದು ಪಕ್ಷ ಸೇರುತ್ತೇನೆ ಎಂದು ತಿಳಿಸಿದ್ದೇನೆ’ ಎಂದರು.

‘ಗೋಕಾಕದಲ್ಲಿರುವ ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಇದರ ಭಾಗವಾಗಿ ಬದಲಾವಣೆಗೆ ತಕ್ಕಂತೆ ನಾನೂ ಪಕ್ಷ ಬದಲಾವಣೆ ಮಾಡಬೇಕಾಗಿದೆ. ಅನಿವಾರ್ಯವಾಗಿ ಯಾವುದಾದರೂ ಪಕ್ಷದ ಜೊತೆ ಕೈಜೋಡಿಸಬೇಕಾಗಿದೆ. ಅದರಲ್ಲೂ ಕಾಂಗ್ರೆಸ್‌ ಜೊತೆ ಸೇರಿದರೆ ನನ್ನ ಹೋರಾಟಕ್ಕೆ ಬಲ ಬರುತ್ತದೆ ಎಂದು ಭಾವಿಸಿದ್ದೇನೆ. ಇದಕ್ಕೆ ನನ್ನ ಹಿತೈಷಿಗಳಿಂದಲೂ ಒಪ್ಪಿಗೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.