ADVERTISEMENT

ಕನ್ನಡ ಫಲಕಕ್ಕಾಗಿ ಮಾತುಕತೆ ನಡೆಸಿ: ಅಶೋಕ ಚಂದರಗಿ

​ಪ್ರಜಾವಾಣಿ ವಾರ್ತೆ
Published 10 ಮೇ 2022, 11:44 IST
Last Updated 10 ಮೇ 2022, 11:44 IST

ಬೆಳಗಾವಿ: ‘ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಎಂಎಸ್‌ಆರ್‌ಟಿಸಿ) ಬಸ್‌ಗಳ ನಾಮಫಲಕದಲ್ಲಿ ಕನ್ನಡ ಬಳಸುವ ಸಂಬಂಧ ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕು’ ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಎನ್‌ಡಬ್ಲ್ಯುಕೆಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕ, ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

‘ಹೊರ ರಾಜ್ಯಗಳಿಗೆ ತೆರಳುವ (ಕೆಎಸ್‌ಆರ್‌ಟಿಸಿ) ಬಸ್‌ಗಳ ನಾಮಫಲಕದಲ್ಲಿ ಕನ್ನಡ, ಇಂಗ್ಲಿಷ್‌ ಮತ್ತು ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೂ ಬಳಸಲಾಗುತ್ತಿದೆ. ಆದರೆ, ಕರ್ನಾಟಕಕ್ಕೆ ಬರುವ ಎಂಎಸ್‌ಆರ್‌ಟಿಸಿ ಬಸ್‌ಗಳ ನಾಮಫಲಕದಲ್ಲಿ ಕನ್ನಡ ಬಳಸದ್ದರಿಂದ ಗಡಿ ಭಾಗದ ಕನ್ನಡಿಗರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ಮಾತನಾಡಿ ಕನ್ನಡ ಬಳಸುವಂತೆ ತಿಳಿಸಬೇಕು’ ಎಂದಿದ್ದಾರೆ.

‘ಆದರೂ ಎಂಎಸ್‌ಆರ್‌ಟಿಸಿಯವರು ಎಚ್ಚೆತ್ತುಕೊಳ್ಳದಿದ್ದರೆ, ಮಹಾರಾಷ್ಟ್ರಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳ ನಾಮಫಲಕದಲ್ಲಿ ಕನ್ನಡ ಮಾತ್ರ ಬಳಸುವಂತೆ ಹೋರಾಟ ಮಾಡಲಾಗುವುದು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಶಿವಪ್ಪ ಶಮರಂತ, ಎಂ.ಜಿ. ಮಕಾನದಾರ, ಶಂಕರ ಬಾಗೇವಾಡಿ, ಸಲೀಮ್‌ ಖತೀಬ್‌, ವೀರೇಂದ್ರ ಗೋಬರಿ ಒತ್ತಾಯಿಸಿದ್ದಾರೆ.

ADVERTISEMENT

ಆ ರಾಜ್ಯದ ಬಸ್‌ಗಳಲ್ಲಿ ಕನ್ನಡ ಕಡೆಗಣಿಸುತ್ತಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಅದನ್ನು ಆಧರಿಸಿ ಕನ್ನಡ ಹೋರಾಟಗಾರರು ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.