ಬೆಳಗಾವಿ: 18 ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, 2,704 ಮಂದಿ ಸಮೀಕ್ಷೆಗೆ ಒಳಪಟ್ಟಿದ್ದಾರೆ. ಆದರೆ, 1982ರ ನಂತರ ಜನಿಸಿದ ಮಾಜಿ ದೇವದಾಸಿಯರನ್ನು ಸಮೀಕ್ಷೆಯಿಂದ ಕೈಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
1993–94 ಹಾಗೂ 2007–08ರಲ್ಲಿ ರಾಜ್ಯದಲ್ಲಿ ಮಾಜಿ ದೇವದಾಸಿಯರ ಸಮೀಕ್ಷೆ ನಡೆದಿತ್ತು. ಮೊದಲ ಸಲ 3,589, ಎರಡನೇ ಸಲ 1,195 ಮಂದಿ ಸಮೀಕ್ಷೆಗೆ ಒಳಪಟ್ಟಿದ್ದರು. ಸರ್ಕಾರದಿಂದ ಅವರಿಗೆ ವಿವಿಧ ಸೌಕರ್ಯ ನೀಡಿ, ದೇವದಾಸಿ ಪದ್ಧತಿಗೆ ಕಡಿವಾಣ ಹಾಕುವುದಕ್ಕೆ ಅನೇಕ ಕ್ರಮ ಕೈಗೊಳ್ಳಲಾಗಿತ್ತು. ಹೀಗಿದ್ದರೂ ಕೆಲವರು ಸಮೀಕ್ಷೆಯಿಂದ ಹೊರಗೆ ಉಳಿದಿದ್ದಾರೆ ಎಂಬ ದೂರು ಬಂದವು. ಹಾಗಾಗಿ ಮರುಸಮೀಕ್ಷೆಗೆ ಆಗ್ರಹ ಕೇಳಿಬಂದ ಕಾರಣ, ಸರ್ಕಾರ ಇದನ್ನು ಕೈಗೊಳ್ಳುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುತ್ತಿರುವ ಸಮೀಕ್ಷೆ ಸೆಪ್ಟೆಂಬರ್ 15ರಿಂದ ಆರಂಭವಾಗಿದ್ದು, ಮಾಜಿ ದೇವದಾಸಿಯರನ್ನು ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ) ಕಚೇರಿಗೆ ಕರೆಯಿಸಿ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ, ಕುಟುಂಬದ ವಿವರ ಮತ್ತು ಸರ್ಕಾರಿ ಸೌಲಭ್ಯ ಪಡೆಯುತ್ತಿರುವ ಮಾಹಿತಿ ಪಡೆಯಲಾಗುತ್ತಿದೆ.
ಆದರೆ, ‘1982ರ ನಂತರ ಜನಿಸಿದವರನ್ನು ಸಮೀಕ್ಷೆಗೆ ಒಳಪಡಿಸುವುದಿಲ್ಲ’ ಎಂದು ಸರ್ಕಾರ ಷರತ್ತು ಹಾಕಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ವಯಸ್ಸಿನ ನಿರ್ಬಂಧ ಹೇರದೆ, ಎಲ್ಲ ಮಾಜಿ ದೇವದಾಸಿಯರನ್ನೂ ಸಮೀಕ್ಷೆಗೆ ಒಳಪಡಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ 2,807 ಮಾಜಿ ದೇವದಾಸಿಯರು ಜೀವಂತ ಇರುವುದನ್ನು ಗುರುತಿಸಲಾಗಿತ್ತು. ಈ ಪೈಕಿ 2026ರ ಜ.20ರವರೆಗೆ 2,704 ಜನರ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನೂ 103 ಜನರ ಸಮೀಕ್ಷೆ ಆಗಬೇಕಿದೆ. ಇದಲ್ಲದೆ, ತಮ್ಮನ್ನು ಸಮೀಕ್ಷೆಗೆ ಒಳಪಡಿಸುವಂತೆ 442 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರು ನಿಜವಾಗಿಯೂ ಮಾಜಿ ದೇವದಾಸಿ ಇದ್ದಾರೆಯೇ ಎಂದು ಖಾತ್ರಿಪಡಿಸಿಕೊಳ್ಳಲು ಅಧಿಕಾರಿಗಳು ಅವರ ಮನೆಗೆ ಹೋಗಿ ಪರಿಶೀಲಿಸಿ, ಸ್ಥಾನಿಕ ಚೌಕಾಸಿ ಮಾಡುತ್ತಿದ್ದಾರೆ.
ಸರ್ಕಾರದ ನಿಯಮದಂತೆ ಜಿಲ್ಲೆಯಲ್ಲಿ ಮಾಜಿ ದೇವದಾಸಿಯರ ಸಮೀಕ್ಷೆ ನಡೆಯುತ್ತಿದೆ. ಶೀಘ್ರ ಪೂರ್ಣಗೊಳ್ಳಲಿದೆಆರ್.ಚೇತನಕುಮಾರ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ
ವಯಸ್ಸಿನ ಬೇಧ ಮರೆತು ಎಲ್ಲರನ್ನೂ ಸಮೀಕ್ಷೆಗೆ ಒಳಪಡಿಸಬೇಕು. ಯಾವೊಬ್ಬ ಮಾಜಿ ದೇವದಾಸಿಯೂ ವಂಚಿತವಾಗಬಾರದುಸೀತವ್ವ ಜೋಡಟ್ಟಿ, ಸಿಇಒ, ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ, ಘಟಪ್ರಭಾ
ಸಮೀಕ್ಷೆಗೆ ಒಳಪಟ್ಟವರು
ತಾಲ್ಲೂಕು;ಮಾಜಿ ದೇವದಾಸಿಯರು
ಅಥಣಿ;372
ಚಿಕ್ಕೋಡಿ;275
ಗೋಕಾಕ;107
ಹುಕ್ಕೇರಿ;392
ರಾಯಬಾಗ;512
ರಾಮದುರ್ಗ;299
ಕಾಗವಾಡ;210
ಬೈಲಹೊಂಗಲ;39
ಖಾನಾಪುರ;28
ನಿಪ್ಪಾಣಿ;126
ಬೆಳಗಾವಿ;15
ಮೂಡಲಗಿ;227
ಸವದತ್ತಿ;102
ಒಟ್ಟು;2,704
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.