ADVERTISEMENT

ಧಾರವಾಡ–ಕಿತ್ತೂರು–ಬೆಳಗಾವಿ ರೈಲು ಮಾರ್ಗ: ತೆವಳುತ್ತಿದೆ ಭೂ ಸ್ವಾಧೀನ ಪ್ರಕ್ರಿಯೆ

ಎಂ.ಮಹೇಶ
Published 14 ಫೆಬ್ರುವರಿ 2022, 12:50 IST
Last Updated 14 ಫೆಬ್ರುವರಿ 2022, 12:50 IST
   

ಬೆಳಗಾವಿ: ಈ ಭಾಗದ ಜನರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರುವ ‘ಧಾರವಾಡ–ಕಿತ್ತೂರು–ಬೆಳಗಾವಿ ರೈಲು ಮಾರ್ಗ’ ನಿರ್ಮಾಣ ಕಾಮಗಾರಿಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ. ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡುವೆ, ತಮ್ಮ ಕೃಷಿ ಜಮೀನು ನೀಡಲು ತಾಲ್ಲೂಕಿನ ಕೆಲವು ಹಳ್ಳಿಗಳ ರೈತರಿಂದ ವಿರೋಧ ವ್ಯಕ್ತವಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಬಿಜೆಪಿಯ ದಿವಂಗತ ಸುರೇಶ ಅಂಗಡಿ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ವಹಿಸಿದ ಮುತುವರ್ಜಿಯ ಪರಿಣಾಮ ಯೋಜನೆಯು 2 ವರ್ಷಗಳ ಹಿಂದೆಯೇ ಘೋಷಣೆಯಾಗಿದೆ. ಅವರ ನಿಧನದ ನಂತರ ಯೋಜನೆಯು ನಿರೀಕ್ಷಿತ ವೇಗದಲ್ಲಿ ಅನುಷ್ಠಾನದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎನ್ನುವ ಬೇಸರ ಇಲ್ಲಿನ ಜನರದಾಗಿದೆ.

ಸುರೇಶ ಅಂಗಡಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಮಂಗಲಾ ಅಂಗಡಿ ಅವರನ್ನು ಜನರು ಗೆಲ್ಲಿಸಿದ್ದಾರೆ. ಅವರ ಮೇಲೆ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ.

ADVERTISEMENT

ಕುಂಟುತ್ತಿದೆ:

ರಾಜ್ಯ ಸರ್ಕಾರದ ಹೋದ ಬಜೆಟ್‌ನಲ್ಲಿ ಧಾರವಾಡ–ಕಿತ್ತೂರು–ಬೆಳಗಾವಿ ನಡುವೆ 73 ಕಿ.ಮೀ. ಉದ್ದದ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ₹ 463 ಕೋಟಿ ಅನುದಾನ ಮೀಸಲಿಡಲಾಗಿದೆ. ಆದರೆ, ಇದಕ್ಕೆ ಅತ್ಯಗತ್ಯವಾಗಿರುವ ಭೂಸ್ವಾಧೀನ ಪ್ರಕ್ರಿಯೆಯೇ ಕುಂಟುತ್ತಾ ಸಾಗಿದೆ. 2021–2022ರ ಕೇಂದ್ರ ಬಜೆಟ್‌ನಲ್ಲಿ ಯೋಜನೆಗೆ ₹50 ಕೋಟಿ ಮೀಸಲಾಗಿಡಲಾಗಿತ್ತು. ಭೂ ಸ್ವಾಧೀನ ಪ್ರಕ್ರಿಯೆ ನಡೆಯದಿದ್ದರಿಂದ ಅನುದಾನ ಖರ್ಚಾಗಿಲ್ಲ. ಕೇಂದ್ರದ ಬಜೆಟ್‌ನಲ್ಲಿ ಈ ಬಾರಿ ₹20 ಕೋಟಿಯನ್ನಷ್ಟೆ ನೀಡಲಾಗಿದೆ. ಮಾರ್ಗ ನಿರ್ಮಾಣಕ್ಕೆ ಅಹತ್ಯವಾದ ಭೂಮಿಯನ್ನು ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಕಾಮಗಾರಿ ಆರಂಭಿಸಲು ಇಲಾಖೆ ಸಿದ್ಧವಿದೆ. ಆದರೆ, ಭೂಮಿ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಎಲ್ಲೆಲ್ಲಿ, ಎಷ್ಟೆಷ್ಟು?:

ಯೋಜನೆಯಂತೆ ಈ ಮಾರ್ಗಕ್ಕೆ ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಹಾಗೂ ಧಾರವಾಡ ಜಿಲ್ಲೆಯಲ್ಲಿ 225 ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಅವರು. ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆಯಾದರೂ, ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಮೇಲುಸ್ತುವಾರಿ ವಹಿಸುವ ಕೆಲಸವೂ ನಡೆದಿಲ್ಲ. ಕೋವಿಡ್ ಪರಿಸ್ಥಿತಿಯ ಕಾರ್ಮೋಡವೂ ಕೂಡ ಕವಿದಿತ್ತು.

ಈ ರೈಲು ಮಾರ್ಗಕ್ಕೆ ₹927 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

‘ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಅಗತ್ಯವಾದ ಭೂಸ್ವಾಧೀನ ಕಾರ್ಯವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಗೆ ವಹಿಸಲಾಗಿದೆ. ಅಗತ್ಯವಾದ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ನಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ನಿಖರವಾಗಿ ಎಷ್ಟು ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದರ ಸಮಗ್ರ ವರದಿ ಸಲ್ಲಿಸುವಂತೆ ಬೆಳಗಾವಿ ಉಪ ವಿಭಾಗಾಧಿಕಾರಿ ಹಾಗೂ ಬೈಲಹೊಂಗಲ ಉಪ ವಿಭಾಗಾಧಿಕಾರಿಗೆ ಸೂಚಿಸಿದ್ದೇನೆ‘ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತ್ವರಿತವಾಗಿ ನಿರ್ಮಾಣಗೊಳ್ಳಲಿ:

‘ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಅಲ್ಲಿ 8 ಕಿ.ಮೀ. ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಭೂಸ್ವಾಧೀನ ಹಾಗೂ ರೈಲ್ವೆ ಮಾರ್ಗಕ್ಕಾಗಿ ರಾಜ್ಯ ಸರ್ಕಾರ ₹600 ಕೋಟಿ ಬಿಡುಗಡೆ ಮಾಡಿದೆ’ ಎಂದು ಮೂಲಗಳು ತಿಳಿಸಿವೆ.

ಹೊಸ ಮಾರ್ಗ ನಿರ್ಮಾಣದಿಂದ, ಎರಡೂ ನಗರಗಳ ನಡುವಿನ ರೈಲು ಪ್ರಯಾಣದ ಅವಧಿಯು 31 ಕಿ.ಮೀ. ಕಡಿಮೆ ಆಗಲಿದೆ. ಪ್ರಸ್ತುತ ಧಾರವಾಡದಿಂದ ಬೆಳಗಾವಿ ತಲುಪಲು 4 ತಾಸು ಸಮಯ ಬೇಕು. ಲೋಂಡಾ ಬಳಸಿಕೊಂಡು ಬೆಳಗಾವಿಗೆ ಬರಬೇಕು. ನೇರ ರೈಲು ಮಾರ್ಗ ನಿರ್ಮಾಣವಾದರೆ ಸಮಯ ಉಳಿತಾಯ ಆಗುತ್ತದೆ. ಕೇವಲ 45 ನಿಮಿಷಗಳಲ್ಲಿ ತಲುಪಬಹುದು. ಹೀಗಾಗಿ, ತ್ವರಿತವಾಗಿ ನಿರ್ಮಾಣವಾಗಬೇಕು ಎನ್ನುವುದು ಜನರ ಆಗ್ರಹವಾಗಿದೆ.

ಮರುಪರಿಶೀಲನೆಗೆ ಆಗ್ರಹ

‘ಈ ರೈಲು ಮಾರ್ಗಕ್ಕಾಗಿ ತಾಲ್ಲೂಕಿನ ಕೆ.ಕೆ. ಕೊಪ್ಪದಿಂದ ದೇಸೂರುವರೆಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಸಮೀಪದಲ್ಲೇ ಲಭ್ಯವಿರುವ ಬಂಜರು ಭೂಮಿಯನ್ನು ಆ ಕಾರ್ಯಕ್ಕೆ ಬಳಸಿಕೊಳ್ಳಬೇಕು’ ಎಂದು ಅಲ್ಲಿನ ರೈತರು ಆಗ್ರಹಿಸಿದ್ದಾರೆ. ಪ್ರತಿಭಟನೆಯನ್ನೂ ನಡೆಸಿದ್ದಾರೆ.

‘ಸಣ್ಣ ರೈತರ ಚಿಕ್ಕ ಹಿಡುವಳಿಯ ಮತ್ತು ಕಬ್ಬು ಬೆಳೆಯುವ ನೀರಾವರಿ ಜಮೀನು ಇವಾಗಿವೆ. ಇದನ್ನೆ ಅವಲಂಬಿಸಿ ಗರ್ಲಗುಂಜಿ, ದೇಸೂರು, ರಾಜಹಂಸಗಡ, ನಂದಿಹಳ್ಳಿ, ನಾಗೇನಹಟ್ಟಿ, ನಾಗಿರಹಾಳ, ಕೆ.ಕೆ. ಕೊಪ್ಪ, ಹಲಗಿಮರಡಿ ಮೊದಲಾದ ಗ್ರಾಮಗಳ ಜನರು ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಬಹುತೇಕರು ಕೃಷಿ ಅವಲಂಬಿಸಿದ್ದಾರೆ. ಅದನ್ನು ಕಿತ್ತುಕೊಳ್ಳಬಾರದು. ಮರುಪರಿಶೀಲನೆ ನಡೆಸಬೇಕು’ ಎನ್ನುವುದು ಅವರ ಒತ್ತಾಯವಾಗಿದೆ.

ನ್ಯಾಯಯುತ ಪರಿಹಾರ: ಮಂಗಲಾ

ರೈಲು ಮಾರ್ಗಕ್ಕೆ 2022–23ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ₹ 20 ಕೋಟಿ ಬಿಡುಗಡೆ ಮಾಡಿದೆ. ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ನಿಗದಿತ ಅವಧಿಯಲ್ಲೇ ಪೂರ್ಣಗೊಳ್ಳಲಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯುತ ಪರಿಹಾರ ಕೊಡಿಸಲಾಗುವುದು. ಮರು ಸಮೀಕ್ಷೆ ಅಗತ್ಯವಿಲ್ಲ. ದಿ.ಸುರೇಶ ಅಂಗಡಿ ಅವರು ಇದ್ದಾಗಲೇ ನಡೆಸಿದ್ದ ಸಮೀಕ್ಷಾ ವರದಿಯಂತೆಯೇ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಂಸದೆ ಮಂಗಲಾ ಅಂಗಡಿ ಸ್ಪಷ್ಟಪಡಿಸಿದರು.

ನಿರ್ದೇಶನ ನೀಡಿರುವೆ

ಮಾರ್ಗಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಬೆಲೆ ನಿಗದಿಪಡಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದೇನೆ. ನಂತರ ಪ್ರಕ್ರಿಯೆ ತ್ವರಿತವಾಗಿ ನಡೆಯಲಿದೆ.

–ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.