ADVERTISEMENT

ಜಾತಿಗೊಂದು ಪೀಠ ಸ್ಥಾಪನೆ ಸಲ್ಲದು: ದಯಾನಂದ ಸವದಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 13:33 IST
Last Updated 19 ಜುಲೈ 2021, 13:33 IST

ಬೆಳಗಾವಿ: ‘ಜಾತಿಗೊಂದು ಪೀಠ ಸ್ಥಾಪನೆ ಸಲ್ಲದು. ಮೀಸಲಾತಿ ಬೇಡಿಕೆ ಇಟ್ಟುಕೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿಸುವುದು ಹಾಗೂ ಜಾತಿಗಳ ನಡುವೆ ಬಿರುಕು ಮೂಡಿಸುವುದನ್ನು ನಿಲ್ಲಿಸಬೇಕು’ ಎಂದು ಶ್ರೀಕೃಷ್ಣ ಧ್ಯಾನ, ಯೋಗ ಪೀಠದ ಅಧ್ಯಕ್ಷ ದಯಾನಂದ ಸವದಿ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಬಸವ ತತ್ವದ ಹಿನ್ನೆಲೆಯಲ್ಲಿ ಸಮಾಜ ಕಟ್ಟುವ ಕೆಲಸ ನಡೆಯಬೇಕು. ಅದಕ್ಕೆ ವಿರುದ್ಧವಾಗಿ ಕಳಂಕ ತರುವ ಕೆಲಸವನ್ನು ಜಾತಿ ಪೀಠಗಳು ಮಾಡಬಾರದು’ ಎಂದರು.

‘ಹರಿಹರ ಮತ್ತು ಕೂಡಲಸಂಗಮದಲ್ಲಿರುವ ಪಂಚಮಸಾಲಿ ಪೀಠಗಳ ನಡುವೆ ಹೊಂದಾಣಿಕೆ ಇಲ್ಲವಾಗಿದೆ. ಆ ಮಠಗಳ ಪೀಠಾಧಿಪತಿಗಳು ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಆದರೆ, ಈ ಮೀಸಲಾತಿಯಿಂದ ಸಮಾಜದ ಅಭಿವೃದ್ಧಿ ಆಗುತ್ತದೆ ಎಂಬ ಭರವಸೆ ಇಲ್ಲ. ಹೀಗಾಗಿ, ಸಮಾಜವನ್ನು ಒಡೆಯುವ ಕೆಲಸಕ್ಕೆ ಯಾರೂ ಕೈ ಹಾಕಬಾರದು’ ಎಂದು ಒತ್ತಾಯಿಸಿದರು.

ADVERTISEMENT

‘ವೀರಶೈವ ಲಿಂಗಾಯತ ಒಳಪಂಗಡಗಳನ್ನು ಜಾತಿ ಆಧಾರದ ಮೇಲೆ ಒಡೆಯುವುದರಿಂದ ಮುಂದೊಂದು ದಿನ ಸಮಾಜಕ್ಕೆ ದೊಡ್ಡ ಗಂಡಾಂತರ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಾವೆಲ್ಲರೂ ಒಂದಾಗಿ ಇರುವುದಕ್ಕಾಗಿ ಸಿದ್ಧಗಂಗಾ ಹಾಗೂ ಸುತ್ತೂರು ಸ್ವಾಮೀಜಿಗಳು ಎಲ್ಲರಿಗೂ ಮಾರ್ಗದರ್ಶನ ಮಾಡಬೇಕು’ ಎಂದು ಕೋರಿದರು.

ಮುಖಂಡ ಗಂಗಾಧರ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.