ADVERTISEMENT

ಮಾದಕ ವಸ್ತು ಕಳ್ಳಸಾಗಾಟದಾರರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 12:33 IST
Last Updated 31 ಡಿಸೆಂಬರ್ 2018, 12:33 IST

ಬೆಳಗಾವಿ: ಗೋವಾಗೆ ಮಾದಕ ವಸ್ತು ಹಶೀಷ್‌ (ಚರಸ) ಕಳ್ಳಸಾಗಾಣಿಕೆ ಮಾಡುತ್ತಿದ್ದ ಇಲ್ಲಿನ ಶಹಾಪುರದ ಆಕಾಶ ಬಾಲಚಂದ್ರ ದೇಸಾಯಿ, ಆಸೀಫ್‌ಅಬ್ದುಲ್‌ ಮುನಾಫ್‌ ಬುರಾನವಾಲೆ, ಮಹಾರಾಷ್ಟ್ರದ ರಾಯಗಢ ಪಟ್ಟಣದ ಮಹ್ಮದ ಅಲಿ ಸೈಯದ ಹಾಗೂ ಗೋವಾದ ಅಸ್ನೋಡಾ ಬರದೇಶ ಸಜ್ಜನ ಹೆರವಲಕರ ಅವರಿಗೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಎಂ.ಎಚ್‌. ಅಣ್ಣಯ್ಯನವರ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

2007ರ ಮೇ 28ರಂದು ಆಕಾಶ ಹಾಗೂ ಆಸೀಫ್‌ಅಬ್ದುಲ್‌ ಅವರು ಕಾರಿನಲ್ಲಿ ಹಶೀಷ್‌ ಸಾಗಿಸುತ್ತಿದ್ದಾಗ ಟಿಳಕವಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಆಕಾಶ ಅವರ ಬ್ಯಾಗ್‌ನಿಂದ 5 ಕೆ.ಜಿ ಹಶೀಷ್‌, ರಿವಾಲ್ವರ್‌, 10 ಗುಂಡುಗಳು, 2 ಮೊಬೈಲ್‌, ₹ 2.10 ಲಕ್ಷ ನಗದು ದೊರೆತಿತ್ತು. ಆಸೀಫ್‌ಅಬ್ದುಲ್‌ ಅವರ ಬ್ಯಾಗ್‌ನಿಂದ 3 ಕೆ.ಜಿ. ಹಶೀಷ್‌, 2 ಮೊಬೈಲ್‌, ₹ 35,000 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಇವರಿಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಹಾರಾಷ್ಟ್ರದ ರಾಯಗಢ ಪಟ್ಟಣದ ಮಹ್ಮದ ಅಲಿ ಸೈಯದ ಹಾಗೂ ಗೋವಾದ ಅಸ್ನೋಡಾ ಬರದೇಶ ಪ್ರದೇಶದ ಸಜ್ಜನ ಹೆರವಲಕರ ದಂಧೆಯಲ್ಲಿ ಭಾಗಿಯಾಗಿರುವುದು ತಿಳಿಯಿತು. ಇವರಿಬ್ಬರ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದರು. ಮಹ್ಮದ ಅಲಿ ಅವರಿಂದ 2 ಕೆ.ಜಿ. ಹಶೀಷ್‌, 2 ಮೊಬೈಲ್‌, ಸಜ್ಜನ ಅವರ ಮನೆಯಿಂದ 600 ಗ್ರಾಂ ಹಶೀಷ್‌ ದೊರೆತಿತ್ತು. ಇವರೆಲ್ಲರೂ ಸೇರಿ ಹಶೀಷ್‌ ಅನ್ನು ಗೋವಾ ಅಲ್ಲದೇ, ವಿದೇಶಗಳಿಗೂ ಕಳ್ಳಸಾಗಾಟ ಮಾಡುತ್ತಿದ್ದರು ಎನ್ನುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು.

ADVERTISEMENT

ಮಾದಕ ವಸ್ತು ಕಳ್ಳಸಾಗಾಣಿಕೆಯಲ್ಲಿ ತೊಡಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಎಲ್ಲರಿಗೂ ತಲಾ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 4 ಲಕ್ಷ ದಂಡವನ್ನು ನ್ಯಾಯಾಧೀಶರು ವಿಧಿಸಿದರು. ದಂಡದ ಹಣ ಕಟ್ಟಲು ವಿಫಲವಾದರೆ ಮತ್ತ 2 ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದರು. ಸರ್ಕಾರದ ಪರವಾಗಿ ಜಿ.ಕೆ. ಮಾಹುರಕರ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.