ADVERTISEMENT

ಚಿಕ್ಕೋಡಿ | ಬತ್ತಿದ ಜೀವನದಿ; ಹೆಚ್ಚಿದ ದುಗುಡ

ಚಿಕ್ಕೋಡಿ ಉಪ ವಿಭಾಗ ವ್ಯಾಪ‍್ತಿಯಲ್ಲಿ ತಪ್ಪದ ಜಲಕ್ಷಾಮ, ಜಲಚರಗಳ ಮಾರಣಹೋಮ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 6:33 IST
Last Updated 8 ಏಪ್ರಿಲ್ 2024, 6:33 IST
ಕಕಮರಿ ಬಹು ಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಾಗಿ ಕೃಷ್ಣಾ ನದಿಯಲ್ಲಿ 10 ಅಡಿ ಬಾವಿ ತೋಡಲಾಗಿದೆ
ಕಕಮರಿ ಬಹು ಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಾಗಿ ಕೃಷ್ಣಾ ನದಿಯಲ್ಲಿ 10 ಅಡಿ ಬಾವಿ ತೋಡಲಾಗಿದೆ   

ಚಿಕ್ಕೋಡಿ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತ ಕಂಡಿದೆ. ಇದರಿಂದ ಮನುಷ್ಯರು ಮಾತ್ರವಲ್ಲ; ಜಲಚರಗಳಿಗೂ ಆತಂಕ ಎದುರಾಗಿದೆ. ಚಿಕ್ಕೋಡಿ ಉಪವಿಭಾಗದ ಎಲ್ಲ ಪ್ರದೇಶಗಳಲ್ಲೂ ಕುಡಿಯುವ ನೀರಿಗೆ, ಬಳಕೆಗೆ, ಹೊಲ– ಗದ್ದೆಗಳಿಗೆ, ಜಾನುವಾರುಗಳಿಗೂ ಸಂಕಷ್ಟ ಎದುರಾಗಿದೆ.

ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ ತಾಲ್ಲೂಕು ವ್ಯಾಪ್ತಿಯ ನೂರಾರು ಗ್ರಾಮಗಳು ಕೃಷ್ಣಾ ನದಿಯನ್ನು ಅವಲಂಬಿಸಿವೆ. ಉಪ ವಿಭಾಗ ವ್ಯಾಪ್ತಿಯಲ್ಲಿ 10 ಸಣ್ಣ ಪುಟ್ಟ ಬ್ಯಾರೇಜ್‌ಗಳಿದ್ದು, ಇನ್ನು 10 ದಿನಗಳಲ್ಲಿ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿರುವ ನೀರು ಖಾಲಿಯಾಗುವ ಸಾಧ್ಯತೆ ಇದೆ.

ಕಲ್ಲೋಳ- ಯಡೂರ, ಬಾ. ಸವದತ್ತಿ- ಮಾಂಜರಿ, ಉಗಾರ- ಕುಡಚಿ, ದರೂರ- ಹಲ್ಯಾಳ, ಇಂಗಳಿ- ದಿಗ್ಗೇವಾಡಿ, ಹಿಪ್ಪರಗಿ ಜಲಾಶಯ ಸೇರಿದಂತೆ 8ಕ್ಕೂ ಹೆಚ್ಚು ಬ್ಯಾರೇಜ್‌ಗಳಿವೆ. 6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಪ್ಪರಗಿ ಬ್ಯಾರೇಜಿನಲ್ಲಿ ಇದೀಗ 0.833 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹವಿದೆ. ಇನ್ನುಳಿದ ಬ್ಯಾರೇಜ್‌ಗಳು ಅತೀ ಕಡಿಮೆ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ.

ADVERTISEMENT

ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗೆ ಕುತ್ತು:

ಕೃಷ್ಣಾ ನದಿಯಿಂದ 100ಕ್ಕೂ ಹೆಚ್ಚು ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆಯ 12 ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳಿವೆ. ಆದರೆ ಬಹುತೇಕ ಜಾಕವೆಲ್‌ಗಳಲ್ಲಿ ನೀರು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ.

ಅದರಲ್ಲೂ ಝುಂಜರವಾಡ ಗ್ರಾಮದ ಸಮೀಪದ ಜಾಕ್‌ವೆಲ್‌ನಿಂದ ತೆಲಸಂಗ ಹೋಬಳಿಯ ಕಕಮರಿ ಹಾಗೂ 13 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಜಾಕವೆಲ್‌ನಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ. ಹೀಗಾಗಿ ನದಿಯಲ್ಲಿಯೇ 10 ಅಡಿ ಆಳದಲ್ಲಿ ಬಾವಿಯನ್ನು ತೋಡಿ ನೀರು ಸಂಗ್ರಹಿಸಲಾಗುತ್ತಿದೆ. ಒಂದು ವಾರದವರೆಗೆ ನೀರು ಸಂಗ್ರಹ ಮಾಡಿ ವಾರಕ್ಕೊಂದು ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.

ಕೃಷ್ಣಾ ತೀರದಲ್ಲಿ ವಿದ್ಯುತ್ ಕಡಿತ:

ಕೃಷ್ಣಾ ಹಾಗೂ ಉಪ ನದಿಗಳ ವ್ಯಾಪ್ತಿಯಲ್ಲಿ ಇಷ್ಟು ದಿನಗಳ ಕಾಲ ಎಲ್ಲಡೆಯಂತೆ ವಿದ್ಯುತ್ ಪೂರೈಕೆಯನ್ನು ಮಾಡಲಾಗುತ್ತಿತ್ತು. ಆದರೆ ನದಿಯಿಂದ ನೀರೆತ್ತಿ ಕೃಷಿಗೆ ಬಳಕೆ ಮಾಡುತ್ತಿದ್ದರಿಂದ ನದಿ ನೀರು ಖಾಲಿಯಾದರೆ ಏಪ್ರಿಲ್, ಮೇ, ಜೂನ್ ಸೇರಿದಂತೆ ಮಳೆಯಾಗುವವರೆಗೂ ಕುಡಿಯುವ ನೀರು ಪೂರೈಕೆ ಮಾಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಇದೀಗ ದಿನ ಬಿಟ್ಟು ದಿನ 4 ಗಂಟೆಗಳ ಕಾಲ ನದಿ ತೀರದ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ 20 ದಿನಗಳವರೆಗೆ ಬಳಸಹುದಾದ ನೀರು ಇನ್ನು 10 ದಿನಗಳ ಕಾಲ ಹೆಚ್ಚು ಬಳಸಬಹುದಾಗಿದೆ ಎಂಬ ಆಲೋಚನೆ ಜಿಲ್ಲಾಡಳಿತದ್ದಾಗಿದೆ.

ಮಹಾರಾಷ್ಟ್ರದ ಡ್ಯಾಂಗಳಲ್ಲಿ ನೀರು ಕಡಿಮೆ:

105 ಟಿಎಂಸಿ ಅಡಿ ನೀರು ಅಂಗ್ರಹ ಸಾಮರ್ಥ್ಯದ ಕೊಯ್ನಾ ಜಲಾಶಯದಲ್ಲಿ 45 ಟಿಎಂಸಿ ಅಡಿ ನೀರಿದೆ. 8.36 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ರಾಧಾನಗರಿ ಜಲಾಶಯದಲ್ಲಿ 3 ಟಿಎಂಸಿ ಅಡಿ ಮಾತ್ರ ಇದೆ. 25.4 ಟಿಎಂಸಿ ಅಡಿ ಸಾಮರ್ಥ್ಯದ ಕಾಳಮ್ಮವಾಡಿ ಜಲಾಶಯದಲ್ಲಿ 9 ಟಿಎಂಸಿ ಅಡಿ ಇದೆ. 34.4 ಟಿಎಂಸಿ ಸಾಮರ್ಥ್ಯದ ವಾರಣಾ ಜಲಾಶಯದಲ್ಲಿ 13 ಟಿಎಂಸಿ ಅಡಿ ನೀರು ಸಂಗ್ರಹವಿದೆ.

ಈ ಕಾರಣ ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ 4 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಿದ್ದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಬೇಸಿಗೆಯ ಈ ಎರಡು ತಿಂಗಳಲ್ಲಿ ಜನ– ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಿದೆ ಎನ್ನುವುದು ರೈತರ ಕೂಗು.

ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿಯ ನೋಟ
ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ನೀರಿಲ್ಲದೇ ಮೀನುಗಳು ಸತ್ತಿವೆ
ಮೊಸಳೆ ಹಾವಳಿ ಸಾಧ್ಯತೆ
ಕೃಷ್ಣಾ ನದಿ ತೀರದ ಪೊಟರೆಗಳಲ್ಲಿ ನೂರಾರು ಮೊಸಳೆಗಳು ವಾಸವಾಗಿವೆ. ಇಷ್ಟು ದಿನಗಳ ಕಾಲ ಹರಿಯುವ ನದಿಯಲ್ಲಿಯೇ ಮೊಸಳೆಗಳಿಗೆ ಆಹಾರ ಲಭ್ಯವಾಗುತ್ತಿತ್ತು. ಆದರೆ ಕೃಷ್ಣೆ ಸಂಪೂರ್ಣ ಬತ್ತಿದ್ದರಿಂದ ಮೊಸಳೆಗಳು ಆಹಾರ ಹುಡುಕಿಕೊಂಡು ನದಿ ತೀರದ ತೋಟಪಟ್ಟಿಗಳಿಗೆ ನುಗ್ಗುವ ಭೀತಿಯಲ್ಲಿ ಸ್ಥಳೀಯರಿದ್ದಾರೆ. ಮೊಸಳೆ ಕಾಟದಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಎನ್ನುವ ಚಿಂತೆ ನದಿ ತೀರದ ಗ್ರಾಮಗಳ ಹಾಗೂ ತೋಟದ ವಸತಿ ಪ್ರದೇಶದ ಜನರಲ್ಲಿ ಆವರಿಸಿದೆ.

ಇವರೇನಂತಾರೆ

ಯೋಜನೆಗಾಗಿ ಹೊಸ ಬಾವಿ ಕೃಷ್ಣಾ ನದಿಯಿಂದ 12 ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳಿದ್ದು ಕಕಮರಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗೆ ನದಿಯಲ್ಲಿಯೇ ಬೃಹತ್ ಬಾವಿಯನ್ನು ತೋಡಿ ನೀರು ಪೂರೈಸಬೇಕಾದ ದುಃಸ್ಥಿತಿ ಬಂದಿದೆ. ಈಗಾಗಲೇ ಉಪ ವಿಭಾಗದ 50ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

–ಪಾಂಡುರಂಗರಾವ್ ಕಾರ್ಯನಿರ್ವಾಹಕ ಎಂಜಿನಿಯರ್‌ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ

ಬಾಂದಾರ ಕೆಡವಿದ್ದಾರೆ ಕೃಷ್ಣಾ ನದಿಗೆ ಕಲ್ಲೋಳ- ಯಡೂರ ಸೇರಿದಂತೆ ಹಲವು ಕಡೆಗೆ ಬ್ರಿಜ್‌ ಕಂ ಬಾಂದಾರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಹಳೆಯ ಬಾಂದಾರುಗಳನ್ನು ಧ್ವಂಸಗೊಳಿಸಿದ್ದರಿಂದ ಕಲ್ಲೋಳ ಸೇರಿದಂತೆ ಹಲವು ಕಡೆಗೆ ನದಿ ತೀರದ ಜನ ಜಾನುವಾರುಗಳು ನೀರಿಲ್ಲದೇ ಪರದಾಡುತ್ತಿದ್ದಾರೆ.

–ಅರುಣ ಕಮತೆ ಕಲ್ಲೋಳ ನಿವಾಸಿ

ಸಮರ್ಪಕ ನೀರು ಪೂರೈಸಿ ಕಕಮರಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾವಿ ಕೊಳವೆಬಾವಿಯಲ್ಲಿ ನೀರು ಇರುವ ರೈತರು ಇನ್ನುಳಿದವರಿಗೆ ಕುಡಿಯಲು ನೀರು ಕೊಟ್ಟು ಉಪಕರಿಸಬೇಕು. ಬರಗಾಲವನ್ನು ಎಲ್ಲರೂ ಸೇರಿಕೊಂಡು ಎದುರಿಸೋಣ.

–ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ರಾಯಲಿಂಗೇಶ್ವರ ಮಠ ಕಕಮರಿ

ಲಕ್ಷಾಂತರ ಮೀನುಗಳು ಸಾವು
ಹಿಪ್ಪರಗಿ ಜಲಾಶಯದ ಕೆಳ ಭಾಗದಲ್ಲಿ 10 ಕಿ.ಮೀವರೆಗೆ ಕೃಷ್ಣಾ ನದಿ ಬತ್ತಿದೆ. ನದಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಾಗವಾಗಿ ದಾಟಿಕೊಂಡು ಹೋಗಬಹುದಾಗಿದೆ. ಅಷ್ಟೇ ಅಲ್ಲದೇ ನದಿ ಮಧ್ಯದಲ್ಲಿರುವ ಬಂಡೆಗಲ್ಲುಗಳು ತೆರೆದುಕೊಂಡಿವೆ. ತಗ್ಗುಗಳಲ್ಲಿಯೂ ಕೂಡ ನೀರು ಇಲ್ಲದಂತಾಗಿದೆ. ನದಿಯಲ್ಲಿ ನೀರು ಬತ್ತಿದ್ದರಿಂದ ಝುಂಜರವಾಡ ಸೇರಿದಂತೆ ವಿವಿಧೆಡೆ ಕೃಷ್ಣಾ ನದಿಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. ಸತ್ತ ಮೀನಿನ ದುರ್ವಾಸೆನೆ ಸುತ್ತ ಮುತ್ತಲಿನ ಪ್ರದೇಶಗಳಿಗೆ ಹರಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.