ಈರಣ್ಣ ಕಡಾಡಿ
ಬೆಳಗಾವಿ: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಜಾತಿ ಸಮೀಕ್ಷೆ ನಡೆಸುತ್ತಿರುವ ರಾಜ್ಯ ಸರ್ಕಾರ ಹಿಂದೂ ಸಮಾಜ ಒಡೆಯಲು ಪ್ರಯತ್ನಿಸುತ್ತಿದೆ. ಹಾಗಾಗಿ ಈ ಸಮೀಕ್ಷೆ ತಡೆಹಿಡಿಯಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿಯಾನಿದೆ. ಆ ನಷ್ಟ ಭರಿಸಿ ಜನರಿಗೆ ನೆರವಾಗಬೇಕಿದ್ದ ಸರ್ಕಾರ, ಸಮೀಕ್ಷೆ ಮೂಲಕ ವಿವಿಧ ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.
‘ಈ ಸಮೀಕ್ಷೆಗೆ ರೂಪಿಸಿದ ಪಟ್ಟಿಯಲ್ಲಿ 210 ಹೊಸ ಜಾತಿ ಸೃಷ್ಟಿಸಲಾಗಿದೆ. ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಜಾತಿಗಳ ಸೃಷ್ಟಿಕರ್ತರಾಗಿ ಹೊರಹೊಮ್ಮಿದ್ದಾರೆ. ತಮ್ಮ ಮುಖ್ಯಮಂತ್ರಿ ಸ್ಥಾನದ ಕುರ್ಚಿ ಅಲುಗಾಡಬಾರದೆಂದು ಹೊಸ ಗಿಮಿಕ್ ಸೃಷ್ಟಿಸಿದ್ದಾರೆ. ಧರ್ಮಕ್ಕೆ ಕೈಹಚ್ಚಿ ಅಧಿಕಾರ ಕಳೆದುಕೊಂಡಿದ್ದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರೂ, ಅವರು ಹಿಂದೆ ಸರಿಯುತ್ತಿಲ್ಲ. ಜನರು ಸಮೀಕ್ಷೆ ಗೊಂದಲದಲ್ಲಿ ಮುಳುಗಬೇಕು. ತಮ್ಮ ಸ್ಥಾನ ಭದ್ರವಾಗಿರಬೇಕು ಎಂಬುದು ಅವರ ಉದ್ದೇಶವಾಗಿದೆ’ ಎಂದು ಆರೋಪಿಸಿದರು.
‘ಕೇಂದ್ರ ಸರ್ಕಾರವೂ ಜಾತಿ ಜನಗಣತಿ ಮಾಡುವುದಾಗಿ ತಿಳಿಸಿದೆ. ಅದರ ವರದಿ ತೃಪ್ತಿ ತರದಿದ್ದರೆ ನೀವು ಸಮೀಕ್ಷೆ ಮಾಡಿ. ಆದರೆ, ಈಗ ತರಾತುರಿಯಲ್ಲಿ ಸಮೀಕ್ಷೆ ನಡೆಸುವ ಅನಿವಾರ್ಯತೆ ಏನಿದೆ’ ಎಂದು ಪ್ರಶ್ನಿಸಿದರು.
ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಹಾನಗರ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಈರಯ್ಯ ಖೋತ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.