ADVERTISEMENT

ಎಥೆನಾಲ್‌ ಘಟಕ ಸ್ಥಳಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 15:28 IST
Last Updated 13 ಆಗಸ್ಟ್ 2024, 15:28 IST

ಕಾಗವಾಡ: ‘ತಾಲ್ಲೂಕಿನ ಉಗಾರ ಖುರ್ದ ಪಟ್ಟಣದ ಬಳಿ ಇರುವ ಸಕ್ಕರೆ ಕಾರ್ಖಾನೆಯು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ, ಎಥೆನಾಲ್ ಘಟಕ ಪ್ರಾರಂಭಿಸಿದೆ. ಈ ಘಟನ ಜನವಸತಿಗೆ ಹೊಂದಿಕೊಂಡೇ ಇದೆ. ಸುತ್ತಲಿನ ನಿವಾಸಿಗಳು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಪಟ್ಟಣದ ನಿವಾಸಿಗಳು ಆರೋಪಿಸಿದ್ದಾರೆ.

ಉಗಾರ ಖುರ್ದ ಪಟ್ಟಣದ ನಿವಾಸಿಗಳಾದ ಸುನೀಲ ಉನ್ಹಾಳೆ, ಗಣೇಶ ಹಿಮಕರ,ರಂಜೀತಾ ಉನ್ಹಾಳೆ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, ‘ಸಮಸ್ಯೆಯ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಲವಾರು ಬಾರಿ ದೂರು ನೀಡಿದ್ದೇವೆ. ಮಂಡಳಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಕಾರ್ಖಾನೆಯವರೊಂದಿಗೆ ಮಾತನಾಡಿ ಹೋಗುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.

‘ನಮ್ಮನ್ನು ಬೆಂಗಳೂರಿಗೆ ಕರೆದು ಮಾಹಿತಿ ಹಂಚಿಕೊಂಡ ಸಂದರ್ಭದಲ್ಲಿ, 45 ದಿನಗಳ ಒಳಗಾಗಿ ಪರಿಸರ ನಿಯಂತ್ರಣ ಮಂಡಳಿಯ ನಿಯಗಳನ್ನು ಪಾಲಿಸುವಂತೆ ಕಾರ್ಖಾನೆಗೆ ಸೂಚಿಸಿದ್ದರೂ ಕಾರ್ಖಾನೆಯ ಆಡಳಿತ ಮಂಡಳಿ ಇದಕ್ಕೆ ಬೆಲೆ ಕೊಟ್ಟಿಲ್ಲ. ದಿನವೂ ಘಾಟು ವಾಸನೆಯಿಂದ ಜನ ಹೈರಾಣಾಗಿದ್ದಾರೆ. ಮಕ್ಕಳು, ವಯಸ್ಕರಿಗೆ ಉಸಿರಾಟದ ತೊಂದರೆ ಉಂಟಾಗುತ್ತಿದೆ. ಕೂಡಲೇ ಸಂಬಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ಕಾರ್ಖಾನೆಯ ಎಥೆನಾಲ್ ಘಟಕವನ್ನು ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಅವರು ಹೇಳಿದರು.

ADVERTISEMENT

‘ಕಾರ್ಖಾನೆಯ ಎಥೆನಾಲ್ ಘಟಕದಿಂದ ಹೊರ ಬರುವ ಗ್ಯಾಸ್ ಮತ್ತು ವಾಸನೆಯಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ. ಥೈರಾಡ್ ಸಮಸ್ಯೆಯಿಂದ ಉಸಿರಾಟದ ತೊಂದರೆ ಅನುಭವಿಸುತ್ತಿದ್ದೇನೆ’ ಎಂದು ರಂಜೀತಾ ಉನ್ಹಾಳೆ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.