ADVERTISEMENT

ಬಿಜೆಪಿ ಸರ್ಕಾರ ಉಳಿಸಿಕೊಳ್ಳಲು ಸಹಕರಿಸಿ: ಕಾರ್ಯಕರ್ತರಲ್ಲಿ ಶೆಟ್ಟರ್‌ ಮನವಿ

ಕಾರ್ಯಕರ್ತರಿಗೆ ಶೆಟ್ಟರ್ ಮನವಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 14:31 IST
Last Updated 17 ನವೆಂಬರ್ 2019, 14:31 IST
ಅಥಣಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ನೀವೇ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದ ಬೆಂಬಲಿಗರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೈಮುಗಿದರು
ಅಥಣಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ನೀವೇ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದ ಬೆಂಬಲಿಗರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೈಮುಗಿದರು   

ಅಥಣಿ: ‘ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ಈ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವುದು ಕಾರ್ಯಕರ್ತರ ಜವಾಬ್ದಾರಿಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ಇಲ್ಲಿ ಭಾನುವಾರ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಲಕ್ಷ್ಮಣ ಸವದಿ ನಮ್ಮ ಪಕ್ಷದ ನಾಯಕ. ಅವರಿಗೆ ಟಿಕೆಟ್‌ ನೀಡದಿರುವುದಕ್ಕೆ ಬೇಸರಗೊಂಡಿರುವ ಕಾರ್ಯಕರ್ತರ ಭಾವನೆಯನ್ನು ಅರ್ಥ ಮಾಡಿಕೊಂಡಿದ್ದೇವೆ. ಅವರಿಗೆ ಸ್ಥಾನಮಾನದಲ್ಲಿ ಯಾವುದೇ ಕೊರತೆ ಆಗದಂತೆ, ಗೌರವಕ್ಕೆ ಚ್ಯುತಿಯಾಗದಂತೆ ವರಿಷ್ಠರು ನೋಡಿಕೊಳ್ಳುತ್ತಾರೆ. ಮಹೇಶ ಕುಮಠಳ್ಳಿ ಗೆಲ್ಲಿಸುವ ಮೂಲಕ ಎಲ್ಲರ ಕೈಬಲಪಡಿಸಬೇಕು’ ಎಂದು ಕೋರಿದರು.

ADVERTISEMENT

ಲಕ್ಷ್ಮಣ ಸವದಿ ಮಾತನಾಡಿ, ‘ಪಕ್ಷ ನನ್ನ ಮೇಲೆ ವಿಶ್ವಾಸ ಇಟ್ಟಿದೆ. ನಾನು ಪಕ್ಷದ ನಿಷ್ಠಾವಂತ ಸಿಪಾಯಿ. ಅಥಣಿ, ಕಾಗವಾಡ, ಗೋಕಾಕ ಕ್ಷೇತ್ರಗಳಲ್ಲಿ ಪಕ್ಷದವರನ್ನು ಗೆಲ್ಲಿಸುವ ಗುರಿಯನ್ನು ನನಗೆ ನೀಡಲಾಗಿದೆ. ಅಭಿಮಾನಿಗಳಿಗೆ ನೋವಾಗಿದೆ ನಿಜ. ಆದರೆ, ಇದನ್ನು ಮುಂದುವರಿಸಬಾರದು. ಅಧಿಕೃತ ಅಭ್ಯರ್ಥಿ ಮಹೇಶ ಅವರನ್ನು ಗೆಲ್ಲಿಸುವ ಹೊಣೆ ನಮ್ಮೆಲ್ಲರದು’ ಎಂದು ತಿಳಿಸಿದರು.

ಅಭ್ಯರ್ಥಿ ಮಹೇಶ ಕುಮಠಳ್ಳಿ ಮಾತನಾಡಿ, ‘ರಾಜಕಾರಣದ ಧ್ರುವೀಕರಣದ ಪರಿಣಾಮ ಈ ಸನ್ನಿವೇಶ ಸೃಷ್ಟಿಯಾಗಿದೆ. ನಾನು ಸಾಂದರ್ಭಿಕ ಶಿಶುವಾಗಿದ್ದೇನೆ. ಬಿಜೆಪಿ ನನಗೆ ಟಿಕೆಟ್‌ ಕೊಟ್ಟಿದೆ. ಮತಪತ್ರದಲ್ಲಿ ನನ್ನ ಫೋಟೊ ಹಾಗೂ ಹೆಸರು ಇರಬಹುದು. ಆದರೆ ಅದರ ಹಿಂದೆ ಲಕ್ಷ್ಮಣ ಸವದಿ ಶಕ್ತಿ ಇದೆ’ ಎನ್ನುವ ಮೂಲಕ ಗೆಲುವು–ಸೋಲಿಗೆ ಸವದಿ ಹೊಣೆ ಎನ್ನುವ ಸಂದೇಶ ರವಾನಿಸಿದರು.

ಇದಕ್ಕೂ ಮುನ್ನ, ಚುನಾವಣಾ ಉಸ್ತುವಾರಿಗಳಿಗೆ ಸವದಿ ಬೆಂಬಲಿಗರು ಘೇರಾವ್ ಹಾಕಿದರು. ಸವದಿಗೆ ಟಿಕೆಟ್‌ ಕೊಡುವಂತೆ ಆಗ್ರಹಿಸಿದರು. ಕುಮಠಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರ ಸಭೆಗೆ ಹೋಗದಂತೆ ಸವದಿ ಅವರನ್ನು ತಡೆದ ಪ್ರಸಂಗವೂ ನಡೆಯಿತು. ಅವರ ವಿರೋಧದ ನಡುವೆಯೂ ಸವದಿ ಸಭೆಗೆ ತೆರಳಿದರು. ಬಳಿಕ ಸಭೆಯಲ್ಲೂ ಅಭಿಮಾನಿಗಳು ಸವದಿ ಪರ ಘೋಷಣೆಗಳನ್ನು ಕೂಗಿದರು.

ಮುಖಂಡ ಶ್ರೀಕಾಂತ ಕುಲಕರ್ಣಿ, ಶಾಸಕರಾದ ಪಿ. ರಾಜೀವ, ಡಿ.ಎಂ. ಐಹೊಳೆ, ಶಶಿಕಾಂತ ನಾಯಕ, ಸಂತೋಷ ಸಾವಡಕರ, ದತ್ತ ವಾಸ್ಟರ, ಶಿವು ದಿವಾನಮಳ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.