ADVERTISEMENT

ವಿಬಿ–ಜಿ ರಾಮ್‌ ಜಿ ಕಾಯ್ದೆ ಪರಿಣಾಮಕಾರಿ

‌100ರಿಂದ 125ಕ್ಕೆ ಕೆಲಸದ ದಿನ ಹೆಚ್ಚಳ: ಶಾಸಕಿ ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 2:50 IST
Last Updated 10 ಜನವರಿ 2026, 2:50 IST
ಶಾಸಕಿ ಶಶಿಕಲಾ ಜೊಲ್ಲೆ
ಶಾಸಕಿ ಶಶಿಕಲಾ ಜೊಲ್ಲೆ   

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ನರೇಗಾ ಕಾಯ್ದೆ ಬದಲಿಗೆ, ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌(ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಕಾಯ್ದೆಯನ್ನು ಪಾರದರ್ಶಕ ಮತ್ತು ಪರಿಣಾಮಕಾರಿಯನ್ನಾಗಿ ಜಾರಿಗೆ ತರಲು ಉದ್ದೇಶಿಸಿದೆ. ಕೆಲಸದ ದಿನಗಳನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಬಿ–ಜಿ ರಾಮ್‌ ಜಿ ಕಾಯ್ದೆ ಪರಿಣಾಮಕಾರಿಯಾಗಿ ಹಾಗೂ ಪಾರದರ್ಶಕವಾಗಿ  ಜಾರಿಗೆ ಬರುವ ಕಾರಣಕ್ಕೆ, ವಿರೋಧ ಪಕ್ಷಗಳು ಅದನ್ನು ವಿರೋಧಿಸುತ್ತಿವೆ. ಹೊಸ ಕಾಯ್ದೆಯು ಕೆಲಸದ ದಿನಗಳನ್ನು ಕಡಿತಗೊಳಿಸುವುದಿಲ್ಲ. ಬದಲಿಗೆ 25 ದಿನ ಹೆಚ್ಚಿಸಲಾಗಿದೆ. ದಿನಕ್ಕೆ ವೇತನ ₹370 ಸಿಗಲಿದೆ’ ಎಂದರು.

‘ನಕಲಿ ಉದ್ಯೋಗ ಗುರುತಿನ ಚೀಟಿಗಳ ಸೃಷ್ಟಿ, ನಕಲಿ ಫಲಾನುಭವಿಗಳ ಮೂಲಕ ಈ ಹಿಂದೆ ನರೇಗಾ ಯೋಜನೆಯನ್ನು ಕಲವು ಗುತ್ತಿಗೆದಾರರು  ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಪಶ್ಚಿಮ ಬಂಗಾಳ, ತೆಲಂಗಾಣ, ಪಂಜಾಬ್‌ನಲ್ಲಿ ಸಾವಿರಾರು ಕೋಟಿಗಳ ದುರ್ಬಳಕೆಯಾಗಿತ್ತು. ಆದರೆ, ಹೊಸ ಕಾಯ್ದೆಯಲ್ಲಿ ಅದು ಸಾಧ್ಯವಿಲ್ಲ’ ಎಂದರು ತಿಳಿಸಿದರು.

ADVERTISEMENT

‘ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್‌ನವರು ಆರೋಪಿಸುತ್ತಿದ್ದಾರೆ. ಆದರೆ, ಅವರೇ ಯೋಜನೆ ಹೆಸರನ್ನು ಬದಲಾಯಿಸಿದ್ದಾರೆ. ಈ ಹಿಂದೆ ಅದು ‘ಜವಾಹರ ರೋಜಗಾರ’ ಯೋಜನೆಯಾಗಿತ್ತು. ನಂತರ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ)’ ಎಂದು ಮರುನಾಮಕರಣ ಮಾಡಲಾಯಿತು. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಈ ಯೋಜನೆಯನ್ನು ವಿರೋಧಿಸುತ್ತಿದೆ’ ಎಂದರು.

‘ನಾವು ಗ್ರಾಮ ಪಂಚಾಯಿತಿಗಳ ಅಧಿಕಾರ ಕಸಿದುಕೊಂಡಿಲ್ಲ. ಯೋಜನೆ ಅನುಷ್ಠಾನಕ್ಕಾಗಿ ಅವರೇ ಕ್ರಿಯಾಯೋಜನೆ ರೂಪಿಸುತ್ತಾರೆ. ಆದರೆ, ಕೆಲಸಗಳ ನಕಲು ಮಾಡುವುದನ್ನು ತಪ್ಪಿಸಲಾಗುವುದು’ ಎಂದು ಹೇಳಿದರು.

ಬಿಜೆಪಿ ವಕ್ತಾರ ಎಂ.ಬಿ.ಝಿರಲಿ, ಸುಭಾಷ ಪಾಟೀಲ, ಗೀತಾ ಸುತಾರ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.