ADVERTISEMENT

ಒತ್ತುವರಿ ತೆರವು ಕಾರ್ಯಾಚರಣೆ ಶುರು

‘ಪ್ರಜಾವಾಣಿ’ ವರದಿಯಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 12:48 IST
Last Updated 17 ಜೂನ್ 2019, 12:48 IST
ಬೆಳಗಾವಿಯ ಅಂಬೇಡ್ಕರ್‌ ರಸ್ತೆಯ ಪಾದಚಾರಿ ಮಾರ್ಗದಲ್ಲಿದ್ದ ಹಣ್ಣಿನ ಅಂಗಡಿಯನ್ನು ಪಾಲಿಕೆಯವರು ಸೋಮವಾರ ತೆರವುಗೊಳಿಸಿದರಯ
ಬೆಳಗಾವಿಯ ಅಂಬೇಡ್ಕರ್‌ ರಸ್ತೆಯ ಪಾದಚಾರಿ ಮಾರ್ಗದಲ್ಲಿದ್ದ ಹಣ್ಣಿನ ಅಂಗಡಿಯನ್ನು ಪಾಲಿಕೆಯವರು ಸೋಮವಾರ ತೆರವುಗೊಳಿಸಿದರಯ   

ಬೆಳಗಾವಿ: ನಗರದಲ್ಲಿ ಪಾದಚಾರಿ ಮಾರ್ಗಗಳು ಅನ್ಯಉದ್ದೇಶಕ್ಕೆ ಬಳಕೆಯಾಗಿರುವ ಕುರಿತು ‘ಪ್ರಜಾವಾಣಿ’ಯ ‘ನಮ್ಮ ನಗರ ನಮ್ಮ ಧ್ವನಿ’ಯಲ್ಲಿ ಸೋಮವಾರ ಪ್ರಕಟವಾದ ವರದಿಯಿಂದ ಎಚ್ಚೆತ್ತ ನಗರಪಾಲಿಕೆ ಅಧಿಕಾರಿಗಳು, ಬೆಳಿಗ್ಗೆಯಿಂದಲೇ ತೆರವು ಕಾರ್ಯಾಚರಣೆ ನಡೆಸಿದರು.

ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ವಿವಿಧ ತಂಡಗಳು ‘ಪಾದಚಾರಿ ಮಾರ್ಗ ಆಕ್ರಮಿಸಿಕೊಂಡಿದ್ದವರಿಗೆ’ ಬಿಸಿ ಮುಟ್ಟಿಸಿದರು. ಮಧ್ಯಾಹ್ನದವರೆಗೂ ಕಾರ್ಯಾಚರಣೆ ನಡೆಯಿತು.

ಪಾದಚಾರಿಗಳಿಗೆಂದು ನಿರ್ಮಿಸಿದ ಮಾರ್ಗದಲ್ಲಿ ಹಲವು ವರ್ಷಗಳಿಂದಲೂ ಹಣ್ಣಿನ, ಆಟಿಕೆಗಳ ಅಂಗಡಿ, ಹೋಟೆಲ್‌ಗಳನ್ನು ಇಟ್ಟುಕೊಂಡಿದ್ದುದು ಗಮನಕ್ಕೆ ಬಂದಿತು. ಶಾಶ್ವತವಾದ ಅಂಗಡಿ, ಹೋಟೆಲ್‌ ಮಾದರಿಯಲ್ಲಿಯೇ ಕೆಲವರು ವ್ಯವಸ್ಥೆಯನ್ನು ಮಾಡಿಕೊಂಡಿದ್ದುದು ಕಾರ್ಯಾಚರಣೆ ವೇಳೆ ಕಂಡುಬಂದಿತು. ಅವರನ್ನೆಲ್ಲಾ ಅಲ್ಲಿಂದ ಕಳುಹಿಸಿದ, ಅಂಗಡಿಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಮಾರ್ಗಗಳನ್ನು ಪಾಚಾರಿಗಳಿಗೆ ಮುಕ್ತಗೊಳಿಸಿದರು.

ADVERTISEMENT

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್‌ ರಸ್ತೆ, ಖಾನಾಪುರ ರಸ್ತೆ, ಬಿಮ್ಸ್‌ ಎದುರು, ಸದಾಶಿವನಗರ, ನೆಹರೂ ನಗರ, ರಾಮತೀರ್ಥನಗರ ರಸ್ತೆ, ಕಾಕತಿವೇಸ್ ಮೊದಲಾದ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ 50ಕ್ಕೂ ಅಧಿಕ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿದರು.

‘ನಗರದ ವಿವಿಧೆಡೆ ಪಾದಚಾರಿ ಮಾರ್ಗದಲ್ಲಿ ಹಾಕಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಪಾಲಿಕೆಯ ತಂಡದವರು ನಗರದಾದ್ಯಂತ ಕಾರ್ಯಾಚರಣೆ ನಡೆಸಿ, ಅಂಗಡಿ, ಹೋಟೆಲ್ ಹಾಗೂ ತಳ್ಳುಗಾಡಿಗಳನ್ನು ತೆರವುಗೊಳಿಸಿದ್ದಾರೆ. ವ್ಯಾಪಾರಿಗಳು ಮತ್ತೆ ಪಾದಚಾರಿ ಮಾರ್ಗ ಆಕ್ರಮಿಸಿಕೊಳ್ಳದಂತೆ ನಿಗಾ ವಹಿಸುವಂತೆ ಸೂಚಿಸಲಾಗಿದೆ’ ಎಂದು ನಗರಪಾಲಿಕೆ ಆಯುಕ್ತ ಶಶಿಧರ ಕುರೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಪಾದಚಾರಿ ಮಾರ್ಗ ಹಾಗೂ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವುಗೊಳಿಸಲು ಸಂಚಾರ ವಿಭಾಗ ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.