ADVERTISEMENT

ಮನೆ ಬಾಗಿಲಿಗೆ ಪಡಿತರ: ವಿರೋಧ

ಖಾಸಗೀಕರಣದ ಹುನ್ನಾರ: ತಳವಾರ ಆರೋಪ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 12:02 IST
Last Updated 2 ನವೆಂಬರ್ 2021, 12:02 IST
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನ್ಯಾಯಬೆಲೆ ಅಂಗಡಿಯವರು ಭಾಗವಹಿಸಿದ್ದಾರೆ
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನ್ಯಾಯಬೆಲೆ ಅಂಗಡಿಯವರು ಭಾಗವಹಿಸಿದ್ದಾರೆ   

ಬೆಳಗಾವಿ: ಪಡಿತರ ಚೀಟಿದಾರರ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆಗೆ ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳ ಮಾಲೀಕರ ಸಂಘ ಜಿಲ್ಲಾ ಘಟಕದವರು ತೀವ್ರ ವಿರೋಧ ವ್ಯಕ್ತಪಡಿಸಿದರು.

ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸರ್ಕಾರದ ನಡೆಯನ್ನು ವಿರೋಧಿಸಲಾಯಿತು. ವಿರೋಧ ಪಕ್ಷದ ನಾಯಕರು ಈ ನೂತನ ಯೋಜನೆಯ ವಿರುದ್ಧ ದನಿ ಎತ್ತಬೇಕು ಎಂದು ಒತ್ತಾಯಿಸಲಾಯಿತು. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಆಗುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ನೇತೃತ್ವ ವಹಿಸಿದ್ದ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ ಮಾತನಾಡಿ, ‘ಜ.26ರಿಂದ ಮನೆ ಬಾಗಿಲಿಗೆ ಪಡಿತರ ಯೋಜನೆ ಆರಂಭಿಸಲಾಗುವುದು ಎಂದು ಸರ್ಕಾರವು ಹೇಳಿದೆ. ಇದಕ್ಕೆ ನಮ್ಮ ವಿರೋಧವಿದೆ. ಹೊಸ ಕ್ರಮದಿಂದಾಗಿ, ರಾಜ್ಯದಾದ್ಯಂತ 60 ವರ್ಷಗಳಿಂದ ನ್ಯಾಯಬೆಲೆ ಅಂಗಡಿಗಳನ್ನೇ ನಂಬಿ ಜೀವನ ನಡೆಸುತ್ತಿರುವ 17,053 ನ್ಯಾಯಬೆಲೆ ಅಂಗಡಿಗಳ 23ಸಾವಿರಕ್ಕೂ ಹೆಚ್ಚಿನ ಜನರು ಅತಂತ್ರವಾಗಲಿದ್ದಾರೆ. ಕೆಲಸ ಕಳೆದುಕೊಳ್ಳಲಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಹಿಂದಿನಿಂದಲೂ ನಾವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಬಡವರು, ಮಧ್ಯಮ ವರ್ಗದವರಿಗಾಗಿ ಕೆಲಸ ಮಾಡಿದ್ದೇವೆ. ಕೋವಿಡ್‌ನಂತಹ ಕಠಿಣ ಪರಿಸ್ಥಿತಿಯಲ್ಲೂ ಪ್ರಾಣವನ್ನೂ ಲೆಕ್ಕಿಸದೆ ಕಾರ್ಯನಿರ್ವಹಿಸಿದ್ದೇವೆ. ಸೋಂಕಿನ ಭೀತಿಯ ನಡುವೆಯೂ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಿದ್ದೇವೆ. ಹೀಗಿರುವಾಗ, ಹೊಸ ಯೋಜನೆ ಮೂಲಕ ನ್ಯಾಯಬೆಲೆ ಅಂಗಡಿಗಳನ್ನು ಖಾಸಗೀಕರಣ ಮಾಡುವ ಹುನ್ನಾರವನ್ನು ಸರ್ಕಾರ ನಡೆದಿದೆ. ಇದರಿಂದ ನ್ಯಾಯಬೆಲೆ ಅಂಗಡಿಕಾರರು ಮತ್ತವರ ಕುಟುಂಬದವರು ಬೀದಿಗೆ ಬರಲಿದ್ದಾರೆ. ಹೀಗಾಗಿ, ಸರ್ಕಾರದ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದರು.

‘ಜಿಲ್ಲೆಯ ಮುಖಂಡರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಅ.3ರಂದು ಮನವಿ ಸಲ್ಲಿಸಲಾಗುವುದು. ಹೊಸ ಯೋಜನೆಯಿಂದ ಹಿಂದೆ ಸರಿಯುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಕೋರಲಾಗುವುದು’ ಎಂದು ಹೇಳಿದರು.

ಸಂಘದ ಮಾರುತಿರಾವ್ ಅಂಬೋಳಕರ, ಬಸವರಾಜ ದೊಡಮನಿ, ಸುರೇಶ ರಾಜೂಕರ, ದಿನೇಶ ಚಂದ್ರಶೇಖರ ಬಾಗಡೆ, ಬಿ.ಎಸ್. ಕಾಮಣ್ಣವರ, ಜಗದೀಶ ನರಸಣ್ಣವರ, ಕೆ.ಎಸ್. ವಸ್ತ್ರದ, ಪಂಕಜ ಪಾಟೀಲ, ಪ್ರಭುಗೌಡ ಪಾಟೀಲ, ಮಹಾದೇವಪ್ಪ ಕಾಮನ್ನವರ, ನಾರಾಯಣ ಕಾಲಕುಂದ್ರಿ, ನಾರಾಯಣ ನಲವಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.