ಹುಕ್ಕೇರಿ: ‘ಪಟ್ಟಣದ ಮಾಸಾಬಿ ದರ್ಗಾದಿಂದ ತಾಲ್ಲೂಕಿನ ಕೋಚರಿ ಮತ್ತು ಮಸರಗುಪ್ಪಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅತಿಕ್ರಮಣವಾಗಿದ್ದು, ರಸ್ತೆ ನಿರ್ಮಿಸಲಿಕ್ಕೆ ಮತ್ತು ಜನರಿಗೆ ಹೋಗಿ ಬರಲಿಕ್ಕೆ ತೊಂದರೆಯಾಗುತ್ತಿದೆ. ಅತಿಕ್ರಮಣ ಮಾಡಿದ ರಸ್ತೆಯನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಿ ಅನುಕೂಲ ಮಾಡಿ’ ಎಂದು ಆಗ್ರಹಿಸಿ ರೈತರು ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ರೈತರು ಬಂದು ಹೋಗಲು, ರೈತರ ದನಕರುಗಳನ್ನು ಮತ್ತು ಬೆಳೆದ ಬೆಳೆ ಸಾಗಿಸಲು ತುಂಬಾ ತೊಂದರೆ ಇದೆ. ಜತೆಗೆ ಮಳೆಗಾಲದಲ್ಲಿ ಜನರು ಎದುರಿಸುವ ಸಮಸ್ಯೆಯನ್ನು ರೈತರಾದ ಅಪ್ಪಾಸಾಹೇಬ ಸಂಕನ್ನವರ ಮತ್ತು ಬಿ.ಎಸ್.ಮುನ್ನೋಳಿ ಅಧಿಕಾರಿಗಳ ಮುಂದೆ ತೋಡಿಕೊಂಡರು.
ಮುಸ್ಲಿಂ ಮೊಕಾಶಿ ಸಮುದಾಯದಲ್ಲಿ ತೀರಿಕೊಂಡ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಲು ತೊಂದರೆಯಾಗುತ್ತಿದೆ ಎಂದು ಕಲಂದರ್ ಮೊಕಾಶಿ ತಿಳಿಸಿದರು. ರಸ್ತೆಗೆ ಸಂಬಂಧಿತ ಅಧಿಕೃತ ದಾಖಲೆ ಪತ್ರ ತೋರಿಸಿ ನಂತರ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಭೂದಾಖಲೆ ಸಹಾಯಕ ನಿರ್ದೇಶಕಿ ತನ್ವೀನ್ ಡಾಂಗೆ ಮತ್ತು ಉಪ ತಹಶೀಲ್ದಾರ್ ನಾಗೇಂದ್ರ ಪಾಟೀಲ್ ರೈತರ ಸಮಸ್ಯೆ ಆಲಿಸಿ ಮಾತನಾಡಿ, ಸರ್ವೇ ಮಾಡಿ, ಅನಧಿಕೃತ ಎಂದು ಕಂಡು ಬಂದಲ್ಲಿ ತೆರವುಗೊಳಿಸಿ ರಸ್ತೆ ಮಾಡುವ ಭರವಸೆ ನೀಡಿದರು.
ರೈತರಾದ ಸೂರ್ಯಕಾಂತ ನಾಯಿಕ, ಕೆ.ಪಿ.ಮೊಕಾಶಿ, ಅನೀಸ್ ವಂಟಮೂರಿ, ಅಪ್ಪಾಸಾಹೇಬ ಸಂಕನ್ನವರ, ರಾಜು ಬಾಗಲಕೋಟ, ಅಶೋಕ (ಸಿದ್ದಪ್ಪ) ನಾಯಿಕ, ರಾವಸಾಹೇಬ ನಾಯಿಕ, ರಫಿಕ್ ಕಳಾವಂತ, ಮಹಾದೇವ ಮಾನೆ, ಅಣ್ಣಪ್ಪ ಕರೆಪ್ಪಗೋಳ ಬಾಬು ಮುನ್ನೋಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.