ADVERTISEMENT

ಅಧಿಕಾರಿಗಳಿಂದಲೇ ಗೊಬ್ಬರ ಕಳವು ಆರೋಪ: ತೋಟಗಾರಿಕೆ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:31 IST
Last Updated 16 ಜೂನ್ 2025, 14:31 IST
16 ಸವದತ್ತಿ 01 : ಇಲ್ಲಿನ ತೋಟಗಾರಿಕೆ ಇಲಾಖಾಧಿಕಾರಿಗಳೇ ಗೊಬ್ಬರ ಲೂಟಿ ನಡೆಸಿದ್ದಾರೆಂದು ಆರೋಪಿಸಿ ರೈತರು ಪ್ರತಿಭಟಿಸಿದರು.
16 ಸವದತ್ತಿ 01 : ಇಲ್ಲಿನ ತೋಟಗಾರಿಕೆ ಇಲಾಖಾಧಿಕಾರಿಗಳೇ ಗೊಬ್ಬರ ಲೂಟಿ ನಡೆಸಿದ್ದಾರೆಂದು ಆರೋಪಿಸಿ ರೈತರು ಪ್ರತಿಭಟಿಸಿದರು.   

ಸವದತ್ತಿ: ಇಲ್ಲಿನ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿರಿಸಿದ ಗೊಬ್ಬರವನ್ನು ರೈತರಿಗೆ ವಿತರಿಸದೇ ಸ್ವತಃ ಅಧಿಕಾರಿಗಳೇ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ಸದಸ್ಯರು ತೋಟಗಾರಿಕೆ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದರು. 

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಸಂಪಗಾವಿ ಮಾತನಾಡಿ, ‘ತಲಾ ₹ 4,500 ಬೆಲೆಯ 250 ಗೊಬ್ಬರದ ಚೀಲಗಳನ್ನು ಅವಶ್ಯವಿರುವ ರೈತರಿಗೆ ನಿಡದೇ ಅಧಿಕಾರಿಗಳೇ ಕಳವು ಮಾಡಿದ್ದಾರೆ. ಶುಕ್ರವಾರ ಸಂಜೆಯವರೆಗೂ ರೈತರು ಕಚೇರಿಯಲ್ಲಿದ್ದರು. ಕಚೇರಿ ಸಮಯ ಮುಗಿಯುವವರೆಗೂ ನಿಂತರೂ ಗೊಬ್ಬರ ವಿತರಿಸಿಲ್ಲ. ಶನಿವಾರ ಮತ್ತು ಭಾನುವಾರ ರಜೆ ಇದ್ದಾಗ ಕಳವು ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಗೊಬ್ಬರ ಪಡೆದ ರೈತರ ವಿವರ ನೀಡಿರಿ ಎಂದರೆ ನೀಡುತ್ತಿಲ್ಲ. ಉತ್ತರಿಸಬೇಕಾದವರು ಮೊಬೈಲ್‌ ಸ್ವಿಚ್‌ ಆಫ್ ಮಾಡಿದ್ದಾರೆ. ಕೆಲವರು ಸಭೆಯ ನೆಪ ಹೇಳಿ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಮಾರ್ಚ್‌ನಲ್ಲಿ ನೀಡಬೇಕಾದುದನ್ನು ಮಳೆಗಾಲ ಆರಂಭವಾದರೂ ಕೊಡುತ್ತಿಲ್ಲ. ಅದನ್ನೇ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರೈತ ಪ್ರಮುಖ ಬಸವರಾಜ ಬಿಜ್ಜೂರ ಮಾತನಾಡಿ, ‘ಗೊಬ್ಬರ ಲೂಟಿಯಲ್ಲಿ ಜನಪ್ರತಿನಿಧಿಗಳು ಹಾಗೂ ಮೇಲಧಿಕಾರಿಗಳ ಕುಮ್ಮಕ್ಕೂ ಇದೆ. ರಸಗೊಬ್ಬರದ ದೊಡ್ಡ ಹಗರಣ ಇದಾಗಿದೆ’ ಎಂದು ಆರೋಪಿಸಿದರು.

ರಸ್ತೆ ಬಂದ್‌ ಮಾಡಿ ಹೋರಾಟ ತೀವ್ರಗೊಳಿಸಲು ರೈತರು ಮುಂದಾದರು. ಪೊಲೀಸಲು ರೈತರ ಮನವೊಲಿಸಿ ಪ್ರತಿಭಟನೆ ನಿಲ್ಲಿಸಲು ಯಶಸ್ವಿಯಾದರು. ನಂತರ ಶಿರಸ್ತೇದಾರ ಶಶಿರಾಜ ವನಕೆ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಬಸವರಾಜ ಮೊಖಾಶಿ, ಮಹಾಂತೇಶ ಕಮತ, ಬೀರಪ್ಪ ದೇಶನೂರ, ಮಹಾಂತೇಶ ಮುತವಾಡ, ಸಮರ್ಥ ಪಾಟೀಲ, ರಾಮನಗೌಡ ಪಾಟೀಲ, ಶಿವಪ್ಪ ಹೊರಟ್ಟಿ, ಹನಮಂತ ದನದಮನಿ, ಮೂಗಬಸಪ್ಪ ಕರೀಕಟ್ಟಿ, ಮಲ್ಲಿಕಾರ್ಜುನ ಹಂಚಿನಾಳ, ಸಿದ್ದಪ್ಪ ಕರಡಿ, ರಾಮಲಿಂಗಪ್ಪ ದನದಮನಿ, ಗುರುನಾಥ ಕರೀಕಟ್ಟಿ, ಜೆ.ವಿ. ಅಗಡಿ, ಸಿದ್ದಪ್ಪ ಪಟ್ಟದಕಲ್ಲ ಇದ್ದರು.

ಬಾಕಿ ಗೊಬ್ಬರ ವಿತರಣೆ ಶೀಘ್ರ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಗೊಬ್ಬರ ನೀಡುವ ಯೋಜನೆ ಇದಾಗಿದೆ. ಹಣ್ಣು ಹೂವು ತರಕಾರಿ ಬೆಳೆಗಳಿಗೆ ನೀರಿನಲ್ಲಿ ಕರಗುವ 28:28:08 ಹೆಸರಿನ 250 ಬ್ಯಾಗ್ ಗೊಬ್ಬರ ಕಚೇರಿಯಲ್ಲಿತ್ತು. ರೈತರ ಬೇಡಿಕೆಗನುಗುಣವಾಗಿ ಇದನ್ನು ನೀಡಿದ್ದು ಇನ್ನು ಕೆಲವೇ ಚೀಲಗಳನ್ನು ನೀಡುವುದು ಬಾಕಿ ಇದೆ. ಶನಿವಾರವೂ ವಿತರಿಸಲಾಗಿದೆ.ರಮೇಶ ಹಾವರಡ್ಡಿ ಹಿರಿಯ ತೋಟಗಾರಿಕೆ ಅಧಿಕಾರಿ ಸವದತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.