ADVERTISEMENT

ಬೆಂಬಲ ಬೆಲೆ, ರೈತರ ಸಾಲ ಮನ್ನಾಕ್ಕೆ ಆಗ್ರಹ

ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 13:00 IST
Last Updated 11 ಡಿಸೆಂಬರ್ 2018, 13:00 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಮಂಗಳವಾರ ಕೊಂಡಸಕೊಪ್ಪದಲ್ಲಿ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಮಂಗಳವಾರ ಕೊಂಡಸಕೊಪ್ಪದಲ್ಲಿ ಪ್ರತಿಭಟನೆ ನಡೆಸಿದರು   

ಬೆಳಗಾವಿ: ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ‍ಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಾಸನ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಮಂಗಳವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಕೊಂಡಸಕೊಪ್ಪದಲ್ಲಿ ಪ್ರತಿಭಟನೆ ನಡೆಸಿದರು.

ಎತ್ತಿನಹೊಳೆ ಯೋಜನೆಗೆ ಬೇಕಾಗುವ ಜಮೀನನ್ನು ಆಲೂರು, ಬೇಲೂರು, ಅರಸೀಕೆರೆ ತಾಲ್ಲೂಕಿನ ರೈತರಿಂದ ನೇರವಾಗಿ ಖರೀದಿಸಬೇಕು (ಸಕಲೇಶಪುರ ತಾಲ್ಲೂಕಿನ ಮಾಡಿದ ಮಾದರಿಯಲ್ಲಿ). ಮನೆ, ಭೂಮಿ ಕಳೆದುಕೊಂಡವರಿಗೆ ಶೀಘ್ರವೇ ಪುನರ್ವಸತಿ ಕಲ್ಪಿಸಬೇಕು. ಕಾಡಾನೆಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ತೊಂದರೆ, ಹಾನಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಬೆಳೆ ಹಾನಿ ಅನುಭವಿಸಿದರೆ ತಕ್ಕ ಪರಿಹಾರ ನೀಡಬೇಕು. ಆನೆ ಕಾರಿಡಾರ್‌ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಸಾಲ ಮನ್ನಾ ಮಾಡುವ ಮೂಲಕ ಬೆಳೆಗಾರರಿಗೆ ನೈತಿಕ ಸ್ಥೈರ್ಯ ತುಂಬಬೇಕು. ಹಾಲು ಉತ್ಪಾದಕರಿಗೆ ಬರಬೇಕಾದ ಪ್ರೋತ್ಸಾಹಧನದ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಜಲಾಶಯಗಳಲ್ಲಿ ತುಂಬಿರುವ ಹೂಳು ತೆಗೆಸಿ, ಫಲವತ್ತಾದ ಅದನ್ನು ರೈತರ ಜಮೀನುಗಳಿಗೆ ಹಾಕಿಸಬೇಕು. ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮನೆ ಕಟ್ಟಲು ರೈತರಿಗೆ ಉಚಿತವಾಗಿ ಮರಳು ನೀಡಬೇಕು. ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.

ADVERTISEMENT

ಮುಖಂಡ ಕಣಗಾಲಮೂರ್ತಿ ಮಾತನಾಡಿ, ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಖುರ್ಚಿಗೆ ಕಿತ್ತಾಡುತ್ತಿರುವುದರಿಂದ, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ರೈತರು ಅಲ್ಲಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಗಂಭೀರವಾಗಿ ಪರಿಗಣಿಸದಿರುವುದು ಸರಿಯಲ್ಲ. ಮಳೆ–ಬೆಳೆ ಇಲ್ಲದೇ ರೈತರು ಸಾಲ ತೀರಿಸುವುದು ಸಾಧ್ಯವಾಗಿಲ್ಲ. ಅವರಿಗೆ ಬ್ಯಾಂಕ್‌ಗಳಿಂದ ನೋಟಿಸ್ ಜಾರಿ ಮಾಡಿ, ಬೆದರಿಸಲಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.