ADVERTISEMENT

ಬೈಲಹೊಂಗಲ: ಚಾಲಕ, ನಿರ್ವಾಹಕರ ಮೇಲೆ ಹಲ್ಲೆ: 4 ತಾಸು ಸಂಚಾರ ಬಂದ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:38 IST
Last Updated 25 ಏಪ್ರಿಲ್ 2024, 15:38 IST
ಬೈಲಹೊಂಗಲದಲ್ಲಿ ಗುರುವಾರ ಚಾಲಕ, ನಿರ್ವಾಹಕರ ದಿಢೀರ್‌ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡಿದರು– ಪ್ರಜಾವಾಣಿ ಚಿತ್ರ
ಬೈಲಹೊಂಗಲದಲ್ಲಿ ಗುರುವಾರ ಚಾಲಕ, ನಿರ್ವಾಹಕರ ದಿಢೀರ್‌ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡಿದರು– ಪ್ರಜಾವಾಣಿ ಚಿತ್ರ   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆದಿದೆ. ಘಟನೆ ಖಂಡಿಸಿ ಸಾರಿಗೆ ಸಿಬ್ಬಂದಿ ಬಸ್‌ ಓಡಾಟ ನಿಲ್ಲಿಸಿ ಏಕಾಏಕಿ ಪ್ರತಿಭಟನೆ ನಡೆಸಿದರು. ಇದರಿಂದ ನಾಲ್ಕು ತಾಸು ಪ್ರಯಾಣಿಕರು ಪರದಾಡುವಂತಾಯಿತು.

ಗೋರಿಮಾ ದಿನ್ನಿಮನಿ ಎಂಬ ಮಹಿಳೆ ಬಸ್‌ ಹತ್ತಲು ಬಂದಿದ್ದರು. ಬಸ್‌ ಮುಂದಕ್ಕೆ ಚಲಿಸಿದ್ದರಿಂದ ಓಡೋಡಿ ಬಂದು ಹತ್ತಿದರು. ಹತ್ತುವವರೆಗೂ ಬಸ್‌ ಏಕೆ ನಿಲ್ಲಿಸಿಲ್ಲ ಎಂದು ಕೋಪದಿಂದ ಚಾಲಕ– ನಿರ್ವಾಹಕರನ್ನು ನಿಂದಿಸಿದರು. ಆಗ ಚಾಲಕ– ನಿರ್ವಾಹಕರೂ ವಾಗ್ವಾದ ಶುರು ಮಾಡಿದರು. ಜಗಳ ನಡೆಯುತ್ತಿರುವುದನ್ನು ಕಂಡು ಮಹಿಳೆ ಕಡೆಯ ಮೂವರು ಪುರುಷರು ಚಾಲಕ, ನಿರ್ವಾಹಕರನ್ನು ಎಳೆದಾಡಿ ಮನಸೋ ಇಚ್ಛೆ ಥಳಿಸಿದರು ಎಂದು ಬಸ್‌ನಲ್ಲಿದ್ದ ಪ್ರಯಾಣಿಕರು ತಿಳಿಸಿದರು.

ಘಟನೆಯಿಂದ ಪ್ರಯಾಣಿಕರೆಲ್ಲ ಒಂದೆಡೆ ಗುಂಪಾಗಿ ಸೇರಿದರು. ಚಾಲಕ ನಿರ್ವಾಹಕರನ್ನು ಬಿಡಿಸಲು ಬಂದವರ ಮೇಲೂ ಹಲ್ಲೆ ಮಾಡಿದರು. ನಿಲ್ದಾಣದೊಳಗಿನ ಕಂಟ್ರೋಲ್‌ ಪಾಯಿಂಟ್‌ನ ಗಾಜುಗಳನ್ನೂ ಒಡೆದು ಹಾಕಿದರು ಎಂದು ಘಟಕದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ADVERTISEMENT

ಇದರಿಂದ ಕೋ‍ಪಗೊಂಡ ಸಾರಿಗೆ ಘಟಕದ ಎಲ್ಲ ಸಿಬ್ಬಂದಿ ಬಸ್‌ಗಳನ್ನು ನಿಲ್ಲಿಸಿ, ದಿಢೀರ್‌ ಪ್ರತಿಭಟನೆ ಆರಂಭಿಸಿದರು. ಸಂಜೆ 7.30ರವರೆಗೂ ಸಂಚಾರ ಬಂದ್‌ ಆಯಿತು. ಮೆರವಣಿಗೆ ಮೂಲಕ ಪೊಲೀಸ್ ಠಾಣೆಗೆ ತೆರಳಿ ಸಿಪಿಐ ಎಂ.ಎಸ್.ಹೂಗಾರ ಮುಂದೆ ದೂರು ಹೇಳಿದರು. ತಕ್ಷಣ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಪಟ್ಟು ಹಿಡಿದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬೆಳಗಾವಿ ವಿಭಾಗೀಯ ಸಂಚಾರ ಅಧಿಕಾರಿ ಕೆ.ಕೆ.ಲಮಾಣಿ ಅವರಿಗೂ ಸಿಬ್ಬಂದಿ ಘೇರಾವ್‌ ಹಾಕಿದರು. ‘ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅದನ್ನು ಬಿಟ್ಟು ಸಮಜಾಯಿಷಿ ನೀಡಿ, ಕೆಲಸ ಮಾಡಲು ಹೇಳುತ್ತಿದ್ದೀರಿ’ ಎಂದು ತರಾಟೆ ತೆಗೆದುಕೊಂಡರು.

ಆಸ್ಪತ್ರೆಗೆ ದಾಖಲು:

ತೀವ್ರ ಗಾಯಗೊಂಡ ಬಸ್‌ ಚಾಲಕ ಚಂದಸಾಬ್ ಫನಿಬಂದ್, ನಿವಾರ್ಹಕ ಮಹಾದೇವ ದೇಮನ್ನವರ ಅವರನ್ನು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.

ಆರೋಪಿಗಳಾದ ಯಕ್ಕುಂಡಿ ಗ್ರಾಮದ, ಸಿಐಎಸ್‌ಎಫ್‌ ಯೋಧ ಶಬ್ಬೀರ್‌, ಇಮಾಮ್‌ಹುಸೇನ್‌, ಮೆಹಬೂಬ್ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.