ADVERTISEMENT

ಕೊಲೆಯಾದವನ ಫಿಂಗರ್‌ ಪ್ರಿಂಟ್‌ನಿಂದಲೇ ಆರೋಪಿ ಪತ್ತೆ!

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 2:50 IST
Last Updated 26 ಡಿಸೆಂಬರ್ 2025, 2:50 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಬೆಳಗಾವಿ: ತಾನು ಪ್ರೀತಿಸುತ್ತಿದ್ದ ಮಹಿಳೆ ಜೊತೆಗೆ ಲೈಂಗಿಕ ಸಂಬಂಧ ಇಟ್ಟುಕೊಂಡ ಕಾರಣಕ್ಕೆ, ತನ್ನ ಸ್ನೆಹಿತನನ್ನು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಎರಡು ತಿಂಗಳ ಬಳಿಕ ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಕೂಡ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಆತನ ಫಿಂಗರ್‌ ಪ್ರಿಂಟ್‌ ಪತ್ತೆ ಮಾಡಿ ಅದರ ಸಹಾಯದಿಂದ ಎರಡು ಕೊಲೆ ಪ್ರಕರಣ ಭೇದಿಸಲಾಗಿದೆ.

ಚಿಕ್ಕೋಡಿ ಪಟ್ಟಣದ ಪ್ರದೀಪ್ ಬಾಬು ನಾಯಕ (35) ಬಂಧಿತ ಆರೋಪಿ. ಅಥಣಿ ತಾಲ್ಲೂಕು ಮಹೇಶವಾಡಿ ಗ್ರಾಮದ ತುಕಾರಾಮ್ ಬಸಪ್ಪ ಶಿಂಘೆ (32) ಕೊಲೆಯಾದವ. ಘಟಪ್ರಭಾದಲ್ಲಿ ಅ. 22ರಂದು ಕೊಲೆ ನಡೆದಿತ್ತು. ಈ ಇಬ್ಬರೂ ವಿವಿಧ ರೈಲು ನಿಲ್ದಾಣಗಳ ಸುತ್ತ ಪ್ಲಾಸ್ಟಿಕ್‌ ಬಾಟಲಿಗಳು ಆಯುವ ಕೆಲಸ ಮಾಡಿಕೊಂಡಿದ್ದರು.

ADVERTISEMENT

‘ಪ್ರದೀಪ್‌ ಅಶ್ವಿನಿ ಎಂಬ ಮಹಿಳೆ ಜತೆಗೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದ. ಅದೇ ಮಹಿಳೆ ಜತೆಗೆ ತುಕಾರಾಮ್‌ ಕೂಡ ಲೈಂಗಿಕ ಸಂಪರ್ಕ ಬೆಳೆಸಿದ್ದ. ಈ ಸಿಟ್ಟಿನಿಂದ ಸ್ನೇಹಿತರ ಮಧ್ಯೆ ಜಗಳವಾಗಿ, ತುಕಾರಾಮನ ಕೊಲೆ ನಡೆದಿತ್ತು. ಗುರುತು ಪತ್ತೆಯಾಗದಂತೆ ಕಲ್ಲಿನಿಂದ ಮುಖವನ್ನು ಸಂಪೂರ್ಣವಾಗಿ ಜಜ್ಜಲಾಗಿತ್ತು. ಶವವನ್ನು ಬೆತ್ತಲೆ ಸ್ಥಿತಿಯಲ್ಲಿ ಬಿಡಲಾಗಿತ್ತು. ಕೊಲೆಯಾದ ವ್ಯಕ್ತಿಯ ಫಿಂಗರ್‌ ಪ್ರಿಂಟ್ ಪಡೆದು ಆತ ಯಾರು ಎಂದು ಹುಡುಕಾಟ ಶುರು ಮಾಡಿದೆವು. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಕಳವು ಮಾಡಿದ್ದ ವ್ಯಕ್ತಿಯ ಜತೆಗೆ ಈತನ ಫಿಂಗರ್‌ಪ್ರಿಂಟ್‌ ಹೊಂದಿಕೆಯಾದವು. ಮೃತ ವ್ಯಕ್ತಿ ತುಕಾರಾಮ್‌ ಎಂದು ಗೊತ್ತಾಯಿತು. ಆಗ ಆತನ ಸಂಪರ್ಕದಲ್ಲಿದ್ದವರನ್ನು ಹುಡುಕಲು ಶುರು ಮಾಡಿದೆವು’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಮನಗೌಡ ಬಸರಗಿ‌ ತಿಳಿಸಿದರು.

‘ಮಹಾರಾಷ್ಟ್ರದ ಮೀರಜ್‌ ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್‌ ಆಯುತ್ತಿದ್ದ ಆರೀಫ್ ಎಂಬ ವ್ಯಕ್ತಿ ಪತ್ತೆಯಾದ. ಆತನಿಂದ ಪ್ರದೀಪ್‌, ಅಶ್ವಿನಿ ಹಾಗೂ ತುಕಾರಾಮ್‌ ನಡುವಿನ ಸಂಬಂಧದ ಮಾಹಿತಿ ಗೊತ್ತಾಯಿತು. ಕೊಲೆ ನಡೆದಿದ್ದ ಘಟಪ್ರಭದಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಪ್ರದೀಪ ಹಾಗೂ ತುಕಾರಾಮ್‌ ಜತೆಗೆ ಓಡಾಡಿದ್ದು ಗೊತ್ತಾಗುತ್ತದೆ. ಪ್ರದೀಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಘಟನೆ ಬಿಚ್ಚಿಟ್ಟಿದ್ದಾನೆ’ ಎಂದು ತಿಳಿಸಿದರು.

‘ಇವರೆಲ್ಲರೂ ಪ್ಲಾಸ್ಟಿಕ್ ಆಯುವ ಕೆಲಸ ಮಾಡುತ್ತಿದ್ದರು. ಕೊಲೆಯಲ್ಲಿ ಮಹಿಳೆ ಪಾತ್ರವಿಲ್ಲ. ಆದರೆ, ಆಕೆಯ ಮುಂದೆಯೇ ತುಕಾರಾಮನ ಕೊಲೆ ಮಾಡಿದ್ದರಿಂದ ಮಹಿಳೆಯನ್ನು ಪ್ರತ್ಯಕ್ಷ್ಯ ಸಾಕ್ಷಿ ಮಾಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.