ADVERTISEMENT

ಅಗ್ನಿ ದುರಂತ; ಬಗೆದಷ್ಟು ನಿಗೂಢ

ಮೂರು ದಿನಗಳಾದರೂ ನಂದದ ಬೆಂಕಿ ಕೆನ್ನಾಲಿಗೆ, ತನಿಖೆಗೆ ಅಡ್ಡಿ

ಸಂತೋಷ ಈ.ಚಿನಗುಡಿ
Published 9 ಆಗಸ್ಟ್ 2024, 4:26 IST
Last Updated 9 ಆಗಸ್ಟ್ 2024, 4:26 IST
ಅಗ್ನಿ ದುರಂತ
ಅಗ್ನಿ ದುರಂತ   

ಬೆಳಗಾವಿ:ತಾಲ್ಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಹೊತ್ತಿಕೊಂಡ ಬೆಂಕಿ ಗುರುವಾರ ರಾತ್ರಿಯು ಪೂರ್ಣ ನಂದಿಲ್ಲ. ಶಾಖ ಕಡಿಮೆ ಆಗಿಲ್ಲ. ಆತಂಕ, ನೋವು, ದುಗುಡ ದೂರವಾಗಿಲ್ಲ.

ಅಗ್ನಿ ದುರಂತದಲ್ಲಿ ಮಾರ್ಕಂಡೇಯ ಪುನರ್ವಸತಿ ಕೇಂದ್ರದ ಯಲಗೊಂಡ (ಯಲ್ಲಪ್ಪ) ಗುಂಡ್ಯಾಗೋಳ ಸುಟ್ಟು ಕರಕಲು ಆದರು. 3 ಜಿಲ್ಲೆಗಳ 6 ಅಗ್ನಿಶಾಮಕ ವಾಹನ, 250 ಮಂದಿ ಅಗ್ನಿನಂದಕ ಸಿಬ್ಬಂದಿ, 50 ಎನ್‌ಡಿಆರ್‌ಎಫ್‌ ಸಿಬ್ಬಂದಿ, 250 ಪೊಲೀಸರು 72 ಗಂಟೆ ಕಾರ್ಯಾಚರಣೆ ನಡೆಸಿದರು. ಪದೇ ಪದೇ ನೀರು ಸುರಿದರೂ ಮತ್ತು ಮಳೆಯಾದರೂ ಬೆಂಕಿ ಮಾತ್ರ ಶಮನವಾಗುತ್ತಿಲ್ಲ.

ಕಾರ್ಖಾನೆಯಲ್ಲಿ ಕೆಲ ಕಬ್ಬಿಣದ ವಸ್ತು ಕರಗಿವೆ.ವೈದ್ಯಕೀಯ ಮೆಡಿಕಲ್‌ ಕ್ಷೇತ್ರದಲ್ಲಿ ಬಳಸುವ ಟಿಕ್ಸೊ ಟೇಪ್‌  ಉತ್ಪಾದಿಸುವ ಕಾರ್ಖಾನೆಯಲ್ಲಿ ಇಷ್ಟೊಂದು ‘ಅಗ್ನಿ ಪ್ರಚೋದಕ’ ವಸ್ತು ಏನಿತ್ತು ಎಂಬುದು ಅಧಿಕಾರಿಗಳಲ್ಲಿ ದಿಗಿಲು ಮಾಡಿದೆ.

ADVERTISEMENT

‘ಅಗ್ನಿ ಅನಾಹುತಕ್ಕೆ ಲಿಫ್ಟ್‌ನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಕಾರಣ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ತಿಳಿಸಿದ್ದಾರೆ. ಆದರೆ, ಕಾರ್ಖಾನೆಯ ಕೆಲವರು, ‘ಕಾರ್ಖಾನೆಯಲ್ಲಿ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿತ್ತು. ಅದು ಪ್ಲಾಸ್ಟಿಕ್‌ ವಸ್ತುಗಳಿಗೆ ತಾಗಿ ಬೆಂಕಿ ದೊಡ್ಡದಾಗಿದೆ’ ಎಂದರು.

ಇದನ್ನು ಒಪ್ಪದ ಜಿಲ್ಲಾಧಿಕಾರಿ, ‘ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರೇಟ್‌ ವಿಭಾಗ’ದವರು ಪರಿಶೀಲಿಸಬೇಕು. ಬೆಂಕಿ ಇನ್ನೂ ಉರಿಯುತ್ತಿದೆ. ಅಗ್ನಿಶಾಮಕ ದಳದಿಂದ ಕ್ಲಿಯರನ್ಸ್‌ ಬಂದ ಮೇಲೆ ಮಾತ್ರ ಕಾರ್ಖಾನೆ ಒಳಗೆ ಹೋಗಲು ಸಾಧ್ಯ. ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರೇಟ್‌ ವಿಭಾಗದವರು ಕೂಲಂಕಶವಾಗಿ ತನಿಖೆ ಮಾಡಬೇಕು ಎಂದು ನಿರ್ದೇಶನ ಕೊಟ್ಟಿದ್ದೇನೆ. ಅವರ ವರದಿ ಬಂದ ಬಳಿಕ ನಿಜವಾದ ಕಾರಣ ಗೊತ್ತಾಗಲಿದೆ’ ಎಂದರು.

ಘಟನೆ ನಡೆದಾಗ ಸ್ಥಳದಲ್ಲಿದ್ದ, ಮೃತನ ಸಹೋದರ ಸಂಬಂಧಿ, ‘ಕಾರ್ಖಾನೆಯಲ್ಲಿ ರಾಸಾಯನಿಕ ಅಂಶಗಳುಳ್ಳ ಬ್ಯಾರಲ್‌ ಇತ್ತು. ಅದನ್ನು ತೆಗೆದುಕೊಂಡ ಯಲಗೊಂಡ (ಯಲ್ಲಪ್ಪ) ಲಿಫ್ಟ್‌ನಲ್ಲಿ ಹೊರಟಿದ್ದ. ನಾನು ನೀರು ಕುಡಿಯುತ್ತ ಅಲ್ಲೇ ನಿಂತಿದ್ದೆ. ಅಷ್ಟರಲ್ಲಿ ಬೆಂಕಿ ಹೊತ್ತಿಕೊಂಡಿತು. ಎಲ್ಲರೂ ಒಂದೊಂದು ದಿಕ್ಕಿಗೆ ಓಡಿದರು’ ಎಂದರು.

‘ಇದನ್ನು ವಿದ್ಯುತ್‌ ಅವಘಡ ಎಂದು ಈಗಲೇ ಹೇಳಲು ಆಗುವುದಿಲ್ಲ. ಕಾರ್ಖಾನೆಯಲ್ಲಿ ಪರಿಶೀಲಿಸಬೇಕಿದೆ’ ಎಂದು ಹೆಸಲು ಹೇಳಲಿಚ್ಚಿಸದ ಹೆಸ್ಕಾಂ ಅಧಿಕಾರಿ ಹೇಳಿದರು. ಒಟ್ಟಿನಲ್ಲಿ ಒಬ್ಬ ಕಾರ್ಮಿಕ ಸಾಯಲು ಮತ್ತು ಮೂವರು ತೀವ್ರವಾಗಿ ಗಾಯಗೊಳ್ಳಲು ಕಾರಣವೇನು ಎಂಬುದು ನಿಗೂಢವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.