ADVERTISEMENT

ನಿಪ್ಪಾಣಿ: ಸಚಿವರಾದ ಮೊದಲ ಶಾಸಕಿ

2ನೇ ಗೆಲುವಿನಲ್ಲೇ ಸಚಿವೆಯಾದ ಶಶಿಕಲಾ ಜೊಲ್ಲೆ

ಎಂ.ಮಹೇಶ
Published 20 ಆಗಸ್ಟ್ 2019, 9:39 IST
Last Updated 20 ಆಗಸ್ಟ್ 2019, 9:39 IST
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ   

ಬೆಳಗಾವಿ: ಜಿಲ್ಲೆಯ ನಿ‍ಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಪ್ರಪ್ರಥಮ ಶಾಸಕಿ ಎಂಬ ಹೆಮ್ಮೆ ಗಳಿಸಿದ್ದ ಶಶಿಕಲಾ ಜೊಲ್ಲೆ ಇದೀಗ ಅಲ್ಲಿನ ಮೊದಲ ಸಚಿವೆ ಎಂಬ ದಾಖಲೆಯನ್ನೂ ಸೃಷ್ಟಿಸಿದ್ದಾರೆ.

ನೇರವಾಗಿ ವಿಧಾನಸಭಾ ಚುನಾವಣಾ ಕಣಕ್ಕೆ ದುಮುಕಿದ್ದ ಅವರು ಮೊದಲ ಪ್ರಯತ್ನದಲ್ಲಿ ಸೋಲು ಅನುಭವಿಸಿದ್ದರು. ಅದರಿಂದ ಕಂಗೆಡದೇ ಸಮಾಜಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಜನರೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಇದರ ನೆರವಿನಿಂದಾಗಿ 2013ರ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಗಡಿ ಪ್ರದೇಶವಾದ ಅಲ್ಲಿನ ಕನ್ನಡ ಹಾಗೂ ಮರಾಠಿ ಭಾಷಿಕರಿಬ್ಬರ ಬೆಂಬಲ ಗಳಿಸಿ 2018ರ ಚುನಾವಣೆಯಲ್ಲೂ ವಿಜೇತರಾಗಿ 2ನೇ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ನಿಪ್ಪಾಣಿಯಲ್ಲಿ ಕಮಲ ಅರಳಿಸಿದ ಖ್ಯಾತಿ ಅವರದು.

ಬಿಜೆಪಿ ಪಕ್ಷದ ಹೈಕಮಾಂಡ್‌ ಜೊತೆಗೂ ಇರುವ ಉತ್ತಮ ಸಂಪರ್ಕ ಹೊಂದಿದ್ದಾರೆ. ಜೊತೆಗೆ, ಸಂಘಟನಾ ಕೌಶಲದಿಂದಾಗಿ ಪಕ್ಷದಲ್ಲಿ ಗುರುತಿಸಿಕೊಂಡು ಸಚಿವ ಗಾದಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಿಳಾ ಕೋಟಾದಲ್ಲಿನ ಅವಕಾಶವೂ ಅವರಿಗೆ ವರವಾಗಿ ಪರಿಣಮಿಸಿದೆ. ಇದೆಲ್ಲದರೊಂದಿಗೆ, ರಾಜಕಾರಣದಲ್ಲಿ ಮತ್ತೊಂದು ಯಶಸ್ಸಿನ ಮೆಟ್ಟಿಲೇರುವ ಭಾಗ್ಯವನ್ನು ಪಡೆದುಕೊಂಡಿದ್ದಾರೆ.

ADVERTISEMENT

ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದರು. ಇವರು ಚಿಕ್ಕೋಡಿ ಜಿಲ್ಲೆಯ ಚಿಕ್ಕ ಗ್ರಾಮ ಯಕ್ಸಂಬಾದವರು. ಅಂದರೆ ಒಂದೇ ಊರಿನ ದಂಪತಿ ಏಕಕಾಲದಲ್ಲಿ ಸಂಸದ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. 2018ರ ವಿಧಾನಸಭಾ ಚುನಾವಣೆಯಲ್ಲಿ ಇವರಿಬ್ಬರಿಗೂ ಬಿಜೆಪಿ ಹೈಕಮಾಂಡ್‌ ಟಿಕೆಟ್ ನೀಡಿತ್ತು. ಆಗ, ಚಿಕ್ಕೋಡಿ–ಸದಲಗಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಸಾಹೇಬ ಜೊಲ್ಲೆ ಸೋತಿದ್ದರು. ನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಈ ದಂಪತಿ ತಮ್ಮ ಸಾಂಪ್ರದಾಯಿಕ ಎದುರಾಳಿಗಳಾದ ಚಿಕ್ಕೋಡಿಯ ಮಾಜಿ ಸಂಸದ ‍ಪ್ರಕಾಶ ಹುಕ್ಕೇರಿ ಹಾಗೂ ಚಿಕ್ಕೋಡಿ–ಸದಲಗಾದ ಹಾಲಿ ಶಾಸಕ ಗಣೇಶ ಹುಕ್ಕೇರಿ ಅವರ ವಿರುದ್ಧ ಸದ್ಯದ ಪರಿಸ್ಥಿತಿಯಲ್ಲಿ ಮೇಲುಗೈ ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.