ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ 15 ದಿನಗಳಿಂದ ಮಳೆ ಬೀಳುತ್ತಿರುವುದರಿಂದ ಕೃಷ್ಣಾ ಹಾಗೂ ಉಪನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಈ ಬಾರಿ ಕೃಷ್ಣಾ, ದೂಧಗಂಗಾ, ವೇದಗಂಗಾ ಸೇರಿದಂತೆ ಕೃಷ್ಣಾ ನದಿಯ ಉಪನದಿಗಳಲ್ಲಿ ಮೀನುಗಾರರಿಗೆ ಜೂನ್ ತಿಂಗಳಲ್ಲಿಯೇ ಸುಗ್ಗಿಕಾಲ ಆರಂಭವಾದಂತಾಗಿದೆ.
ತಾಲ್ಲೂಕಿನ ಅಂಕಲಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಬುಧವಾರ ಮೀನುಗಾರರಾದ ಕಿರಣ ಕಿಳ್ಳಿಕೇತ ಹಾಗೂ ಮಹೇಶ ಕಿಳ್ಳಿಕೇತ ಅವರಿಗೆ ಕ್ರಮವಾಗಿ ತಲಾ 22 ಹಾಗೂ 20 ಕೆ.ಜಿ ತೂಕದ ಎರಡು ಬಾಳೆಮೀನು ಬಲೆಗೆ ಬಿದ್ದಿವೆ. ಸಿಹಿ ನೀರಿನ ಶಾರ್ಕ್ ಎಂದು ಕರೆಯಲ್ಪಡುವ ಬಾಳೆ ಮೀನು ಸೈಲ್ಯೂರಿಡೆ ಕುಟುಂಬಕ್ಕೆ ಸೇರಿದೆ. ಇದು ಬೇರೆ ಜಾತಿಯ ಮೀನುಗಳನ್ನು ಬೇಟೆಯಾಡಿ ತಿನ್ನುತ್ತದೆ. ಬಾಳೆಮೀನು ಬಲೆಗೆ ಬಿದ್ದಿದೆ ಅಂದ್ರೆ ಇಲ್ಲಿ ಇನ್ನೂ ಬೇರೆ ಬೇರೆ ತಳಿಯ ಮೀನುಗಳು ಲಭ್ಯ ಇವೆ ಎಂದೇ ಅರ್ಥ.
ಮಳೆಗಾಲದಲ್ಲಿ ಜಲಾಶಯಗಳಲ್ಲಿದ್ದ ಮೀನುಗಳು ಆಹಾರ ಹುಡುಕಿಕೊಂಡು ಮೇಲ್ಮುಖವಾಗಿ ಚಲಿಸುತ್ತವೆ. ಈ ಸಂದರ್ಭದಲ್ಲಿ ತುಂಬಿ ಹರಿಯುವ ನದಿಯಲ್ಲಿ ಆಹಾರ ಲಭ್ಯ ಹೆಚ್ಚಾಗುವುದರಿಂದ ಮೀನುಗಳ ಸಂಚಾರವೂ ಹೆಚ್ಚಿರುತ್ತವೆ. ಇಷ್ಟು ದಿನಗಳವರೆಗೆ ನೀರಿನ ಆಳದಲ್ಲಿದ್ದ ಮೀನುಗಳು ಆಹಾರಕ್ಕಾಗಿ ನದಿಯ ಮೇಲ್ಭಾಗದಲ್ಲಿ ಸಂಚರಿಸುವುದರಿಂದ ಮೀನು ಕೃಷಿಗೆ ಅನುಕೂಲಕರ. ಈ ವರ್ಷ ಮೀನುಗಾರರಿಗೆ ವರ್ಷದ 8 ತಿಂಗಳ ಕಾಲ ಮೀನುಗಾರಿಕೆಗೆ ತೊಂದರೆ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಕೃಷ್ಣಾ ಹಾಗೂ ಉಪನದಿಗಳಲ್ಲಿ ಪ್ರಸ್ತುತ ದಿನಗಳಲ್ಲಿ ಹಾವು ಮೀನು, ಅವಲ, ಪರಕಿ (ಪೆಂಟಿಯಸ್), ಕಟ್ಲಾ, ರೋಹು, ಸಾಮಾನ್ಯ ಗೆಂಡೆ ( ಕಾಮನ್ ಕಾರ್ಪ್) ಮುಂತಾದ ತಳಿಯ ಮೀನುಗಳು ಸಿಗುತ್ತವೆ. ಮೀನುಗಳಿಗೆ ಜೂನ್-ಜುಲೈ ತಿಂಗಳು ಸಂತಾನೋತ್ಪತ್ತಿಯ ಸಮಯವಾಗಿರುವುದರಿಂದ ಸಮುದ್ರ, ನದಿ ಸೇರಿದಂತೆ ಬಹುತೇಕ ಕಡೆಗೆ ಮೀನುಗಾರಿಕೆ ನಿಷೇಧ ಇರುತ್ತದೆ. ಹೀಗಿದ್ದರೂ ಕೆಲವು ಕಡೆಗೆ ಮೀನುಗಾರಿಕೆ ಮಾಡುವುದು ಕಂಡು ಬರುತ್ತದೆ.
ಅಂದಾಜು 1 ಕೆ.ಜಿ ತೂಕದ ಮೀನು 1 ಲಕ್ಷಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ರಾಡಿ ನೀರು, ಹವಾಮಾನ ವೈಪರಿತ್ಯ ಹಾಗೂ ನೀರಿನ ಸೆಳೆತದಿಂದ ಶೇ 70 ರಷ್ಟು ಮೊಟ್ಟೆಗಳು ನಾಶವಾಗಿ, ಶೇ30 ರಷ್ಟು ಮಾತ್ರ ಮರಿಗಳಾಗುತ್ತವೆ. ಹೀಗಾಗಿಯೇ ತಾಯಿ ಮೀನು (ದಪ್ಪ ಹೊಟ್ಟೆ ಇರುವ ಮೀನು) ಬಲೆಗೆ ಬಿದ್ದರೆ ಬಹುತೇಕ ಮೀನುಗಾರರು ಮರಳಿ ನೀರಿಗೆ ಬಿಡುವ ವಾಡಿಕೆ ಇದೆ.
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 7 ಮೀನುಗಾರಿಕೆ ಸಂಘಗಳಿದ್ದು, 800ಕ್ಕೂ ಹೆಚ್ಚು ಕುಟುಂಬಗಳು ಸಂಘಗಳ ಅಡಿಯಲ್ಲಿ ಮೀನುಗಾರಿಕೆ ಮಾಡುತ್ತಿವೆ. ಇಲ್ಲಿನ ಮೀನುಗಳಿಗೆ ಚಿಕ್ಕೋಡಿ, ನಿಪ್ಪಾಣಿ, ಅಂಕಲಿ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ, ಮಿರಜ್ ಮುಂತಾದ ಮಾರುಕಟ್ಟೆಗಳಲ್ಲಿ ಬೇಡಿಕೆ ಇದೆ.
ಪ್ರಸಕ್ತ ಸಾಲಿನಲ್ಲಿ ಮಳೆ ಪ್ರಮಾಣ ಹೆಚ್ಚಿದೆ. ಕೃಷ್ಣಾ ನದಿಯಲ್ಲಿ ಈ ವರ್ಷ ಮೀನು ಕೃಷಿಗೆ ತೊಂದರೆ ಇಲ್ಲ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಅಂದಾಜು 8-10 ಟನ್ ಮೀನು ಲಭ್ಯತೆ ಇದೆರಂಗನಾಥ ಸಿಂಧೆ ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ ಚಿಕ್ಕೋಡಿ
ಈ ವರ್ಷ ಮಳೆ ಹೆಚ್ಚಾಗಿರುವುರಿಂದ ಕೃಷ್ಣಾ ನದಿಯು ಬಹು ಬೇಗ ತುಂಬಿ ಹರಿಯುತ್ತಿದೆ. ಹೀಗಾಗಿ ಮೀನುಕೃಷಿಗೆ ಅನುಕೂಲವಾಗಿದೆ. ಒಂದೇ ದಿನ ಹೆಚ್ಚು ತೂಕದ ಬಾಳೆಮೀನು ಸಿಕ್ಕಿದ್ದು ಖುಷಿಯಾಗಿದೆಕಿರಣ ಕಿಳ್ಳಿಕೇತ ಮೀನುಗಾರ ಅಂಕಲಿ
ಕೃಷ್ಣಾ ನದಿಯಲ್ಲಿ ಮಳೆಗಾಲದಲ್ಲಿ ಸಿಗುವ ಮೀನುಗಳನ್ನು ತಿನ್ನಲು ಖುಷಿ ಎನಿಸುತ್ತದೆ. ಸಮುದ್ರದ ಮೀನುಗಳಿಗಿಂತ ನದಿಯ ಮೀನುಗಳು ತಿನ್ನಲು ರುಚಿಕರಕಾಜಲ್ ಕದಂ ಮೀನು ಪ್ರಿಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.