ADVERTISEMENT

ನೆರೆ ಪರಿಹಾರ: ಕೇಂದ್ರದಿಂದ ತಾರತಮ್ಯ: ಶಾಸಕ ಎಂ.ಬಿ. ಪಾಟೀಲ ಆರೋಪ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:00 IST
Last Updated 16 ಆಗಸ್ಟ್ 2019, 20:00 IST
ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದಲ್ಲಿ ಶಾಸಕ ಎಂ.ಬಿ. ಪಾಟೀಲ ಕುಂದುಕೊರತೆ ಆಲಿಸಿದರು
ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದಲ್ಲಿ ಶಾಸಕ ಎಂ.ಬಿ. ಪಾಟೀಲ ಕುಂದುಕೊರತೆ ಆಲಿಸಿದರು   

ಅಥಣಿ: ‘ನೆರೆ ಪರಿಹಾರ ಕಾರ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಮಹಾರಾಷ್ಟ್ರಕ್ಕೊಂದು ನ್ಯಾಯ, ನಮಗೊಂದು ನ್ಯಾಯ ಮಾಡುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ, ಶಾಸಕ ಎಂ.ಬಿ. ಪಾಟೀಲ ಟೀಕಿಸಿದರು.

ತಾಲ್ಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಹಾರ ಕೇಂದ್ರಗಳಲ್ಲಿರುವ ಜನರಿಗೆ ಸಾಂತ್ವನ ಹೇಳಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೂ ರಾಜ್ಯಕ್ಕೆ ಸಮರ್ಪಕ ಅನುದಾನ ಸಿಕ್ಕಿಲ್ಲ. ನಮ್ಮ ಅಧಿಕಾರವಿದ್ದಾಗಲೂ ತಾರತಮ್ಯ ಮಾಡಿತ್ತು. ಉದ್ಯೋಗ ಖಾತ್ರಿ ಯೋಜನೆಯಡಿ ಬರಬೇಕಾದ ₹ 200 ಕೋಟಿ ನೀಡಲಿಲ್ಲ’ ಎಂದು ಟೀಕಿಸಿದರು.

ADVERTISEMENT

‘ನೆರೆ ಪರಿಹಾರ ನೀಡುವ ವಿಷಯದಲ್ಲಿ ಸರ್ಕಾರಕ್ಕೆ ಕಾಂಗ್ರೆಸ್‌ ಸಂಪೂರ್ಣ ಸಹಕಾರ ನೀಡಲಿದೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಹೆಚ್ಚಿನ ಅನುದಾನ ಬಿಡುಗಡೆಗೆ ಒತ್ತಾಯಿಸಲು ಸರ್ವ ಪಕ್ಷಗಳ ನಿಯೋಗವನ್ನು ಕೇಂದ್ರದ ಬಳಿಗೆ ಕರೆದುಕೊಂಡು ಹೋದರೆ, ನಮಗೆ ಗೊತ್ತಿರುವಷ್ಟು ಮಾಹಿತಿ ಹಂಚಿಕೊಳ್ಳುತ್ತೇವೆ’ ಎಂದರು.

‘ನೆರೆ ಇಳಿದರೂ ಜನರು ಅವರ ಮನೆಗಳಿಗೆ ಹೋಗುವ ಸ್ಥಿತಿಯಲ್ಲಿಲ್ಲ. ಅದಕ್ಕಾಗಿ ಅವರಿಗೆ ಪರ್ಯಾಯ ವ್ಯವಸ್ಥೆ ಆಗಬೇಕು. ನಾನು ವಿಜಯಪುರ, ಬಾಗಲಕೋಟಿ, ಬೆಳಗಾವಿ ಜಿಲ್ಲೆಗಳ ಪ್ರವಾಸ ಮಾಡಿ ಪರಿಸ್ಥಿತಿ ಅಧ್ಯಯನ ಮಾಡಿದ್ದೇನೆ. ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಸುನೀಲ ಸಂಕ, ಶಬ್ಬೀರ ಸಾತಬಚ್ಚೆ, ಚಿದಾನಂದ ಮುಕುನಿ, ನಿಶಾಂತ ದಳವಾಯಿ, ಶಿವು ಗುಡ್ಡಾಪುರ, ರಮೇಶ ಸಿಂದಗಿ, ಶ್ರೀಶೈಲ ಮೇತ್ರಿ, ರಾಘವೇಂದ್ರ ಹಳಿಂಗಳಿ, ಶ್ರೀಕಾಂತ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.