ADVERTISEMENT

‘ಘಮಘಮಿಸದ’ ಪುಷ್ಪ ಹರಾಜು ಕೇಂದ್ರ!

ಉದ್ಘಾಟನೆಯಾಗಿ ತಿಂಗಳೇ ಕಳೆದಿದೆ; ಕಾರ್ಯಾರಂಭ ಮಾಡಿಲ್ಲ

ಎಂ.ಮಹೇಶ
Published 31 ಮಾರ್ಚ್ 2019, 19:30 IST
Last Updated 31 ಮಾರ್ಚ್ 2019, 19:30 IST
ಪುಷ್ಪ ಹರಾಜು ಕೇಂದ್ರದ ನೋಟ
ಪುಷ್ಪ ಹರಾಜು ಕೇಂದ್ರದ ನೋಟ   

ಬೆಳಗಾವಿ: ಹೂ ಬೆಳೆಗಾರರು ಹಾಗೂ ಪುಷ್ಪೋದ್ಯಮಕ್ಕೆ ಅನುಕೂಲ ಮಾಡಿಕೊಡಲು ಇಲ್ಲಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಅಶೋಕ ನಗರದಲ್ಲಿ ನಿರ್ಮಿಸಲಾಗಿರುವ ನಗರದ ಮೊದಲ ಪುಷ್ಪ ಹರಾಜು ಕೇಂದ್ರ ಉದ್ಘಾಟನೆಯಾಗಿ ತಿಂಗಳಾದರೂ ಕಾರ್ಯಾರಂಭ ಮಾಡಿಲ್ಲ.

ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ (ಆರ್‌ಕೆವಿವೈ) ₹ 2 ಕೋಟಿ ಅನುದಾನದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ. ಬರೋಬ್ಬರಿ ಎರಡು ವರ್ಷಗಳಿಂದ ನಡೆದ ನಿರ್ಮಾಣ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣಗೊಂಡಿತ್ತು. ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಿರ್ವಹಿಸಲಾಗಿತ್ತು. ಫೆ. 22ರಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದ್ದರು. ಶೀಘ್ರವೇ ಹರಾಜು ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ನಂತರ ಕೇಂದ್ರದ ಗೇಟಿಗೆ ಬೀಗ ಹಾಕಲಾಗಿದೆ! ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿ, ಇದರ ಪ್ರಯೋಜನವನ್ನು ಫಲಾನುಭವಿಗಳಿಗೆ ಕಲ್ಪಿಸುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಲ್ಲ. ಇದರಿಂದಾಗಿ, ಅಲ್ಲಿ ಹೂಗಳ ಘಮ ಬರುತ್ತಿಲ್ಲ.

ತೊಂದರೆ ನಿವಾರಿಸಲೆಂದು

ADVERTISEMENT

ವ್ಯಾಪಾರಿಗಳು ಪ್ರಸ್ತುತ ಗಾಂಧಿನಗರದಲ್ಲಿ ರಸ್ತೆ ಬದಿಯಲ್ಲಿಯೇ ಹೂವುಗಳ ಮಾರಾಟ ಮಾಡುತ್ತಾರೆ. ಜಿಲ್ಲೆಯ ವಿವಿಧೆಡೆಯಿಂದ ಹೂವುಗಳನ್ನು ತರುವ ರೈತರು ಇಲ್ಲಿನ ಹೂವಿನ ವ್ಯಾಪಾರಿಗಳಿಗೆ ನೀಡುತ್ತಾರೆ. ವ್ಯಾಪಾರಿಗಳು ಸಗಟು ಹಾಗೂ ಚಿಲ್ಲರೆಯಾಗಿ ಹೂವುಗಳನ್ನು ಮಾರುತ್ತಾರೆ. ರಸ್ತೆಯಲ್ಲಿಯೇ ಈ ಚುಟವಟಿಕೆಗಳು ನಡೆಯುವುದರಿಂದ ವಾಹನಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಅದರಲ್ಲೂ ಬೆಳಿಗ್ಗೆಯ ವೇಳೆ ಇಲ್ಲಿ ದಟ್ಟಣೆ ಹೆಚ್ಚಿರುತ್ತದೆ. ಹೀಗಾಗಿ, ಇಲ್ಲಿನ ಚಟುವಟಿಕೆಗಳನ್ನು ನೂತನ ಪುಷ್ಪ ಹರಾಜು ಕೇಂದ್ರಕ್ಕೆ ಸ್ಥಳಾಂತರಿಸಿದರೆ, ಸಾರ್ವಜನಿಕರು, ರೈತರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ ಎಂದು ಯೋಜಿಸಲಾಗಿತ್ತು. ಇದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

ಲೋಕಸಭೆ ಚುನಾವಣೆ ಸಿದ್ಧತೆ, ನೀತಿಸಂಹಿತೆ ಅನುಷ್ಠಾನದ ನೆಪದಲ್ಲಿ ಮುಳುಗಿ ಹೋಗಿರುವ ಅಧಿಕಾರಿಗಳು, ಕೇಂದ್ರದ ಕಾರ್ಯಾರಂಭದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ.

‌ಸೌಲಭ್ಯ ಒದಗಿಸುವುದಕ್ಕಾಗಿ

ಕೇಂದ್ರದಲ್ಲಿ 16 ಅಂಗಡಿಗಳಿಗೆ (ಮಳಿಗೆ) ಅವಕಾಶವಾಗಲಿದೆ. ಪುಷ್ಪ ಕೃಷಿ, ಅದರಿಂದ ಆಗುವ ಪ್ರಯೋಜನಗಳು ಹಾಗೂ ಆರ್ಥಿಕವಾಗಿ ಲಾಭ ಮಾಡಿಕೊಳ್ಳಲು ಇರುವ ಅವಕಾಶಗಳು ಮತ್ತು ಸರ್ಕಾರದ ಯೋಜನೆಗಳ ಕುರಿತು ಅಗಾಗ ತಿಳಿಸಲು, ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಸ್ಥಳಾವಕಾಶವಿದೆ. ರೈತರು ತಂದ ಹೂವುಗಳು ಅಂದು ಮಾರಾಟವಾಗದಿದ್ದಲ್ಲಿ ಸಂರಕ್ಷಿಸಿಡುವುದಕ್ಕಾಗಿ ಕೋಲ್ಡ್‌ ಸ್ಟೋರೇಜ್ ಘಟಕವೂ ಇರಲಿದೆ. ಮಳಿಗೆಗಳನ್ನು ಹಂಚಿಕೆ ಮಾಡುವ ಕಾರ್ಯವೂ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಹೂವು ಬೆಳೆಗಾರರಿಗೆ ನೇರ ಹಾಗೂ ಸಾಮಾನ್ಯ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು. ಮಧ್ಯವರ್ತಿಗಳಿಂದ ಅವರಿಗೆ ಆಗುವ ಶೋಷಣೆ ತಪ್ಪಿಸಬೇಕು ಹಾಗೂ ಒಳ್ಳೆಯ ಬೆಲೆ ದೊರೆಯುವಂತೆ ಆಗಬೇಕು ಎಂಬ ಉದ್ದೇಶದಿಂದ ಸರ್ಕಾರವು ಪುಷ್ಪ ಹರಾಜು ಕೇಂದ್ರಗಳನ್ನು ನಿರ್ಮಿಸಲು ಅನುದಾನ ಒದಗಿಸುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ 3ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರಮಾಣದಲ್ಲಿ ಪುಷ್ಪ ಕೃಷಿ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.