ADVERTISEMENT

5 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 28ಕ್ಕೆ ಬೆಳಗಾವಿಲಿ ಚಾಲನೆ:₹3972 ಕೋಟಿ ಯೋಜನೆ

ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾಗಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 10:22 IST
Last Updated 24 ಫೆಬ್ರುವರಿ 2022, 10:22 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ಬೆಳಗಾವಿ: ‘ಒಟ್ಟು 238 ಕಿ.ಮೀ. ಉದ್ದದ ಹಾಗೂ ₹ 3,972 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ವಿವಿಧ 5 ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಫೆ.28ರಂದು ಬೆಳಿಗ್ಗೆ 10ಕ್ಕೆ ಇಲ್ಲಿನ ನೆಹರೂ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದು ಸಂಸದೆ ಮಂಗಲಾ ಅಂಗಡಿ ತಿಳಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮೊದಲಾದವರು ಭಾಗವಹಿಸಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

ಯಾವ್ಯಾವ ಕಾಮಗಾರಿ?

ADVERTISEMENT

‘ಆರು ಪಥಗಳ ಬೆಳಗಾವಿ-ಸಂಕೇಶ್ವರ ಬೈಪಾಸ್ ರಸ್ತೆ (40 ಕಿ.ಮೀ.) ನಿರ್ಮಾಣಕ್ಕಾಗಿ ₹ 1,479.3 ಕೋಟಿ ಮೊತ್ತದ ಯೋಜನೆ (ಪ್ಯಾಕೇಜ್‌–1) ರೂಪಿಸಲಾಗಿದೆ. ಈ ಮಾರ್ಗದಲ್ಲಿ 19 ದೊಡ್ಡ ಹಾಗೂ 16 ಸಣ್ಣ ಸೇತುವೆಗಳು, 69 ಕಲ್ವರ್ಟ್‌ಗಳು (ಸ್ಲ್ಯಾಬ್‌, ಪೈಪ್‌, ಬಾಕ್ಸ್‌) ಬರುತ್ತವೆ. ಒಂದು ಟೋಲ್ ಪ್ಲಾಜಾ ಇರಲಿದೆ. 39 ಬಸ್‌ ಶೆಲ್ಟರ್‌ಗಳು, 4 ಗ್ರೇಡ್ ಸಪರೇಟರ್‌ಗಳು ಹಾಗೂ 14 ಟ್ರಕ್‌ಗಳ ನಿಲುಗಡೆ ಸ್ಥಳಗಳಿರಲಿವೆ’ ಎಂದು ತಿಳಿಸಿದರು.

‘ಸಂಕೇಶ್ವರ ಬೈಪಾಸ್‌ನಿಂದ ಮಹಾರಾಷ್ಟ್ರ ಗಡಿವರೆಗೆ ಪ್ಯಾಕೇಜ್‌–2ರಲ್ಲಿ 37.836 ಕಿ.ಮೀ. ರಸ್ತೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 1,388.7 ಕೋಟಿ ವಿನಿಯೋಗಿಸಲಾಗುತ್ತಿದೆ. ಇದರಲ್ಲಿ 4.867 ಕಿ.ಮೀ. ಸರ್ವಿಸ್‌ ರಸ್ತೆ ಇರಲಿದೆ. 2 ದೊಡ್ಡ ಸೇತುವೆಗಳು, 8 ಕಲ್ವರ್ಟ್‌ಗಳು, 16 ಬಸ್‌ ಶೆಲ್ಟರ್‌ಗಳು, 3 ಗ್ರೇಡ್‌ ಸಪರೇಟರ್‌ಗಳು ಹಾಗೂ ಟೋಲ್‌ ಪ್ಲಾಜಾ ಬರಲಿದೆ’.

‘ಸಾಂಕ್ವೇಲಿಯಂ–ಜಾಂಬೋಟಿ–ಬೆಳಗಾವಿ ರಸ್ತೆವರೆಗೆ 69.17 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿಗೆ ₹ 246.78 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಒಂದು ದೊಡ್ಡ ಹಾಗೂ 218 ಸಣ್ಣ ಸೇತುವೆಗಳು ಮತ್ತು 9 ಬಸ್‌ ಶೆಲ್ಟರ್‌ಗಳು ಬರಲಿವೆ. ಟೋಲ್‌ ಪ್ಲಾಜಾ ಇರಲಿದೆ’ ಎಂದು ತಿಳಿಸಿದರು.

‘ವಿಜಯಪುರದಿಂದ ಮುರಗುಂಡಿವರೆಗೆ 79.7 ಕಿ.ಮೀ. ಉದ್ದದ ದ್ವಿಪಥದ ಕಾಮಗಾರಿಗೆ ₹ 766.64 ಕೋಟಿ ವಿನಿಯೋಗಿಸಲಾಗುತ್ತಿದೆ. ಸಿದ್ದಾಪುರ–ವಿಜಯಪುರ ದ್ವಿಪಥ ವಿಸ್ತರಣೆ ಕಾಮಗಾರಿಯನ್ನು (11.62 ಕಿ.ಮೀ.) ₹ 90.13 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇವೆರಡೂ ಕಾಮಗಾರಿಗಳನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ನೀಡಲಾಗಿದೆ’ ಎಂದು ಹೇಳಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಇದ್ದರು.

‘ವರ್ತುಲ ರಸ್ತೆ: ಸಚಿವರೊಂದಿಗೆ ಚರ್ಚೆ’

‘ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಆರ್ ಆಗಿದೆ. ಈ ವಿಷಯದಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು. ಅಂತೆಯೇ ಬಾಚಿ–ರಾಯಚೂರು ರಸ್ತೆ ಸುಧಾರಣೆಗೆ ಸಮೀಕ್ಷಾ ಕಾರ್ಯ ಮುಗಿದಿದೆ’ ಎಂದು ಮಂಗಲಾ ಹೇಳಿದರು.

ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ‘ಸುವರ್ಣ ವಿಧಾನಸೌಧದಿಂದ ತಾರಿಹಾಳ–ಚಂದನಹೊಸೂರ ಮಾರ್ಗವಾಗಿ ಸಾಂಬ್ರಾ ವಿಮಾನನಿಲ್ದಾಣ ಸಂಪರ್ಕಿಸಲು ಮತ್ತೊಂದು ರಸ್ತೆ ನಿರ್ಮಾಣದ ಬಗ್ಗೆಯೂ ಗಡ್ಕರಿ ಅವರ ಗಮನಕ್ಕೆ ತರುತ್ತೇವೆ’ ಎಂದು ತಿಳಿಸಿದರು.

‘ವರ್ತುಲ ರಸ್ತೆ ನಿರ್ಮಾಣಕ್ಕೆ ಈಗಾಗಲೇ ₹ 120 ಕೋಟಿ ಬಿಡುಗಡೆ ಆಗಿದೆ. ಈ ಕಾಮಗಾರಿಗೂ ಚಾಲನೆ ನೀಡುವಂತೆ ಗಡ್ಕರಿ ಅವರನ್ನು ಕೋರಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ನಗರದಲ್ಲಿ ಐಟಿ ‍ಪಾರ್ಕ್ ನಿರ್ಮಾಣಕ್ಕಾಗಿ, ಸದ್ಯ ರಕ್ಷಣಾ ಇಲಾಖೆ ವಶದಲ್ಲಿರುವ 725 ಎಕರೆ ಜಾಗ ನೀಡುವಂತೆ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಹಸ್ತಾಂತರಿಸಲು ಏಕೆ ವಿಳಂಬ ಆಗುತ್ತಿದೆಯೋ ಗೊತ್ತಿಲ್ಲ. ನಮ್ಮ ಜಾಗ ನಮಗೆ ಬಿಟ್ಟು ಕೊಡುವಂತೆ ಒತ್ತಾಯಿಸಲಾಗುವುದು’ ಎಂದರು.

ಮಾರ್ಚ್‌ನಲ್ಲಿ...

ಮಹಾನಗರಪಾಲಿಕೆ ಮೇಯ–ಉಪಮೇಯರ್‌ ಚುನಾವಣೆ ವಿಷಯದಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಮಾರ್ಚ್‌ 2ನೇ ವಾರದಲ್ಲಿ ನಡೆಯಬಹುದು.

–ಅಭಯ ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.