ADVERTISEMENT

ಕೋವಿಡ್ ಕಾರಣದಿಂದ ತೈಲ ಬೆಲೆ ಹೆಚ್ಚಳ ಆಗಿದೆ ಎಂದ ಸಚಿವ ಉಮೇಶ್ ಕತ್ತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 14:48 IST
Last Updated 19 ಅಕ್ಟೋಬರ್ 2021, 14:48 IST
ಉಮೇಶ್ ಕತ್ತಿ
ಉಮೇಶ್ ಕತ್ತಿ   

ಬೆಳಗಾವಿ: ‘ಕೋವಿಡ್ ಕಾರಣದಿಂದಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಾಗಿದೆ’ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಕೋವಿಡ್ ನಿಯಂತ್ರಣಕ್ಕೆ ಹಣ ಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ದರ ಹೆಚ್ಚಾದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಹೆಚ್ಚಿಸಿವೆ. ದರ ಇಳಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚರ್ಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಕ್ರಮ ವಹಿಸಲು ಚಿಂತನೆ ನಡೆಸಿದ್ದಾರೆ’ ಎಂದರು.

‘ನರೇಂದ್ರ ಮೋದಿ ಅವರು ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಬಡವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಕೆಲಸವಿಲ್ಲ; ಹೀಗಾಗಿ, ಮೋದಿ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ADVERTISEMENT

‘ಮೇ-ಜೂನ್‍ನಲ್ಲಿ ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಹೀಗಾಗಿ ಐದು ಸಂಘಟನಾತ್ಮಕ ಜಿಲ್ಲೆಗಳ ಕಾರ್ಯಕರ್ತರನ್ನು ಸೇರಿಸಿ ಸಭೆ ಮಾಡಿದ್ದೇವೆ. ಯಾವ ರೀತಿ ಚುನಾವಣೆ ನಡೆಸಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಹಲವರು ಆಕಾಂಕ್ಷಿಗಳಾಗಿದ್ದಾರೆ. ಯಾರಿಗೆ ಟಿಕೇಟ್ ನೀಡಬೇಕು ಎನ್ನುವುದನ್ನು ಪಕ್ಷ ತೀರ್ಮಾನಿಸುತ್ತದೆ. ಅದನ್ನು ಗೌರವಿಸುತ್ತೇನೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸ್ಪರ್ಧಿಸುವ ಬಗ್ಗೆ ಅವರನ್ನೇ ಕೇಳಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.