ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಬೆಳಗಾವಿಯ ಟಿಳಕವಾಡಿಯ ಮೊದಲ ಗೇಟ್ ಬಳಿ ಆಕರ್ಷಕ ಮಂಟಪ ನಿರ್ಮಿಸಿರುವುದು
ಪ್ರಜಾವಾಣಿ ಚಿತ್ರ
ಬೆಳಗಾವಿ: ಸತತ ಮಳೆ ಮಧ್ಯೆಯೂ ನಗರದಲ್ಲಿ ಗಣೇಶೋತ್ಸವಕ್ಕೆ ತಯಾರಿ ಜೋರಾಗಿ ಸಾಗಿದೆ. ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ವೈವಿಧ್ಯಮಯ ವಿನ್ಯಾಸಗಳ ಮಂಟಪಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ವಿಘ್ನ ನಿವಾರಕನ ಆಗಮನಕ್ಕೆ ಈಗ ಐದೇ ದಿನ ಬಾಕಿ ಇವೆ. ಹಬ್ಬದ ದಿನ ಸಮೀಪಿಸುತ್ತಿದ್ದಂತೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ತಯಾರಿ ಚುರುಕುಗೊಳಿಸಿದ್ದರು. ಆದರೆ, ಮಳೆಯಿಂದ ಸಿದ್ಧತೆಗೆ ತೊಡಕಾಗಿದೆ. ಇದರ ಮಧ್ಯೆಯೂ ಮಂಡಳಿಯವರು ಉತ್ಸಾಹದಿಂದ ಮಂಟಪಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಆಯಾ ಮಂಡಳಿಯಿಂದ ನಿಯೋಜನೆಗೊಂಡ ಸ್ವಯಂಸೇವಕರು ಕಾರ್ಮಿಕರೊಂದಿಗೆ ಮಳೆಯಲ್ಲೇ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ.
ನಗರದಲ್ಲಿ 360ಕ್ಕೂ ಅಧಿಕ ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಹಲವು ಮಂಡಳಿ ಗಳು 25ರಿಂದ 30 ಅಡಿ ಎತ್ತರದ ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆಗೆ ಮುಂದಾಗಿವೆ. ಅದಕ್ಕೆ ತಕ್ಕಂತೆ ಮಂಟಪಗಳ ಎತ್ತರವೂ ಹೆಚ್ಚಿದೆ.
ಈ ಹಿಂದೆ ಗಣೇಶೋತ್ಸವ ದಿನದಂದೇ ಎಲ್ಲ ಮಂಡಳಿಯವರು ಭವ್ಯ ಮೆರವಣಿಗೆ ಮೂಲಕ ಮೂರ್ತಿ ತರುತ್ತಿದ್ದರು. ಈ ಸಲ ಹಲವು ಮಂಡಳಿಗಳು ಗಣೇಶೋತ್ಸವಕ್ಕೂ ಮುಂಚಿತವಾಗಿಯೇ ಮೂರ್ತಿಗಳನ್ನು ಮಂಟಪದ ಬಳಿ ತರಲು ಯೋಜಿಸಿವೆ. ಹಬ್ಬದ ದಿನ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಿ, ಗಣೇಶೋತ್ಸವಕ್ಕೆ ಚಾಲನೆ ಕೊಡಲು ತಯಾರಿ ಮಾಡಿಕೊಂಡಿವೆ. ಚವಾಟ್ ಗಲ್ಲಿಯಲ್ಲಿ ‘ಬೆಳಗಾವಿಯ ರಾಜಾ’ ಗಣಪನನ್ನು ಹಬ್ಬಕ್ಕೂ 12 ದಿನ ಮೊದಲೇ ತಂದು ಪ್ರತಿಷ್ಠಾಪಿಸಲಾಗಿದೆ.
‘ಈ ಬಾರಿ ಅತ್ಯಾಕರ್ಷಕ ಮಂಟಪ ನಿರ್ಮಿಸುತ್ತಿದ್ದೆವು. ಈ ಮಧ್ಯೆ ಮಳೆಯಿಂದ ಮಂಡಳಿಗಳಿಗೆ ತೊಂದರೆಯಾಗಿದೆ. ಮಳೆ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ನಿರೀಕ್ಷಿತ ದೇಣಿಗೆ ಸಂಗ್ರಹವಾಗಿಲ್ಲ’ ಎಂದು ಲೋಕಮಾನ್ಯ ತಿಲಕ ಗಣೇಶೋತ್ಸವ ಮಹಾಮಂಡಳಿ ಕಾರ್ಯದರ್ಶಿ ಸುನಿಲ ಜಾಧವ ಹೇಳಿದರು.
‘ಹಬ್ಬದ ದಿನವೇ(ಆ.27) ಮೆರವಣಿಗೆ ಮೂಲಕ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಲು ಕಷ್ಟವಾಗುತ್ತದೆ. ಹಾಗಾಗಿ ಆ.23, 24ರಂದು ಹೆಚ್ಚಿನ ಮಂಡಳಿಯವರು ತಮ್ಮ ಮಂಟಪದ ಬಳಿ ಮೂರ್ತಿಗಳನ್ನು ತಂದು ಇರಿಸಿಕೊಳ್ಳಲಿದ್ದಾರೆ’ ಎಂದರು.
ಗುಂಡಿಗಳನ್ನು ಮುಚ್ಚಲು ವರುಣ ಅಡ್ಡಿ
ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಸಾಗುವ ಮಾರ್ಗ ಹಾಗೂ ವಿವಿಧ ಮಾರ್ಗಗಳಲ್ಲಿನ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಸಂಚಾರಕ್ಕೆ ತೊಡಕಾಗಿದೆ.
ಈಚೆಗೆ ಪೂರ್ವಭಾವಿ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಬೆಳಗಾವಿಯಲ್ಲಿ ಹಾಳಾಗಿರುವ ರಸ್ತೆಗಳನ್ನು ಮಹಾನಗರ ಪಾಲಿಕೆಯಿಂದ ಒಂದು ವಾರದೊಳಗೆ ದುರಸ್ತಿ ಮಾಡಬೇಕು’ ಎಂದು ಸೂಚಿಸಿದ್ದರು.
ಆದರೆ, ವರುಣ ಹಾಳಾದ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗಿದ್ದಾನೆ. ಪ್ರತಿಕ್ರಿಯೆಗಾಗಿ ಪಾಲಿಕೆ ಆಯುಕ್ತೆ ಬಿ.ಶುಭ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದರೂ ಲಭ್ಯವಾಗಲಿಲ್ಲ.
ಮಳೆ ಬಾರದಿದ್ದರೆ ಇಷ್ಟೊತ್ತಿಗೆ ಅರ್ಧದಷ್ಟು ಮಂಟಪ ಸಿದ್ಧವಾಗುತ್ತಿತ್ತು. ಈಗ ಹಬ್ಬದ ಹಿಂದಿನ ದಿನದ ರಾತ್ರಿಯವರೆಗೆ ಸಿದ್ಧಪಡಿಸಲು ಪ್ರಯತ್ನ ನಡೆಸಿದ್ದೇವೆರಮೇಶ ಮೋರೆ, ಅಧ್ಯಕ್ಷ, ಸನ್ಮಾನ ಆಟೊರಿಕ್ಷಾ ಸ್ಟ್ಯಾಂಡ್ ಗಣೇಶೋತ್ಸವ ಮಂಡಳಿ
ಎಷ್ಟೇ ಮಳೆಯಾದರೂ ಸಂಭ್ರಮದಿಂದಲೇ ಹಬ್ಬ ಆಚರಿಸುತ್ತೇವೆ. ಮಂಗಳವಾರದವರೆಗೆ ಸಾರ್ವಜನಿಕ ಮಂಡಳಿಗಳ ಎಲ್ಲ ಮಂಟಪಗಳು ಸಿದ್ಧವಾಗಲಿವೆಸುನಿಲ ಜಾಧವ, ಕಾರ್ಯದರ್ಶಿ, ಲೋಕಮಾನ್ಯ ತಿಲಕ ಗಣೇಶೋತ್ಸವ ಮಹಾಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.