ADVERTISEMENT

ಮಾರಕಾಸ್ತ್ರಗಳಿಂದ ಮಾರಾಮಾರಿ: ನಾಲ್ವರಿಗೆ ಗಾಯ, 13 ಮಂದಿ ವಿರುದ್ಧ ಪ್ರಕರಣ

ತಾಲ್ಲೂಕಿನ ಮಂಡೋಳಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 13:16 IST
Last Updated 3 ಸೆಪ್ಟೆಂಬರ್ 2019, 13:16 IST

ಬೆಳಗಾವಿ: ತಾಲ್ಲೂಕಿನ ಮಂಡೋಳ್ಳಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸೋಮವಾರ ರಾತ್ರಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವ ವೇಳೆ, ಇಬ್ಬರ ನಡುವೆ ಆರಂಭವಾದ ಗಲಾಟೆ ಬಳಿಕ ಗುಂ‍ಪು ಘರ್ಷಣೆಗೆ ಕಾರಣವಾಗಿ ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆದಿದೆ. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಡೋಳಿಯ ಮಹೇಶ ಕೃಷ್ಣ ದಳವಿ (22), ಶೇಖರ ದಳವಿ(27), ಕಲ್ಪನಾ ದಳವಿ (48) ಹಾಗೂ ರಾಜು ಪಾಟೀಲ (ಬಡಸ್ಕರ) (24) ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಅದೇ ಗ್ರಾಮದ ಸಚಿನ ಕದಮ, ಕಿಶನ ಕದಮ, ಸುನೀಲ ಕದಮ, ಅರುಣ ಕದಮ, ಬಾಳಸಾಹೇಬ ಕದಮ, ನಿಂಗಪ್ಪ ಪಾಟೀಲ, ಸಂತೋಷ ಪಾಟೀಲ, ದಿನೇಶ ಪಾಟೀಲ, ಅನಂತ ಪಾಟೀಲ, ಪುಂಡಲೀಕ ಪಾಟೀಲ, ಶ್ರೀಕಾಂತ ಪಾಟೀಲ, ಪ್ರಶಾಂತ ಪಾಟೀಲ, ಶ್ರೀನಾಥ ಪಾಟೀಲ ಅವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಹೇಶ ದಳವಿ ದ್ವಿಚಕ್ರವಾಹನದಲ್ಲಿ ಅಜ್ಜನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಮಂಡೋಳಿಯ ಮಾರುತಿ ಮಂದಿರದ ಬಳಿ ಗಣೇಶ ಮೆರವಣಿಗೆಯಲ್ಲಿ ಡೋಲು ಬಾರಿಸುತ್ತಿದ್ದ ಸಚಿನ ಕದಮ ದಾರಿ ಬಿಟ್ಟಿರಲಿಲ್ಲ. ಈ ವೇಳೆ ಮಾತಿನ ಚಕಮಕಿ ನಡೆದಿತ್ತು. ಸಚಿನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಮರಳುವಾಗಲೂ ಅಡ್ಡ ಬಂದು, ಡೋಲು ಬಾರಿಸುವ ಬಡಿಗೆಯಿಂದ ಮಹೇಶ ಅವರ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದರು. ನಂತರ ತನ್ನೊಂದಿಗೆ 12 ಮಂದಿ ಕರೆದುಕೊಂಡು ಬಂದು ಮನೆಯ ಬಳಿ ಗಲಾಟೆ ಮಾಡಿದ್ದಾರೆ. ಹಲ್ಲೆ ನಡೆಸಿದ್ದಾರೆ’ ಎಂದು ದೂರು ದಾಖಲಾಗಿದೆ.

ಸ್ಥಳಕ್ಕೆಗ್ರಾಮೀಣ ಎಸಿಪಿ ಕೆ.‌ ಶಿವಾರೆಡ್ಡಿ, ಇನ್‌ಸ್ಪೆಕ್ಟರ್‌ ಸಂಗಮೇಶ ಶಿವಯೋಗಿ ಭೇಟಿ ನೀಡಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

‘ಇಬ್ಬರ ನಡುವೆ ಆರಂಭವಾದ ವೈಯಕ್ತಿಕ ಜಗಳ, ನಂತರ ಗಂಪುಗಳ ನಡುವೆ ನಡೆದಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಗಾಯಗೊಂಡವರು, ಆರೋಪಿಗಳೆಲ್ಲರೂ ಮರಾಠಾ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಗಣೇಶೋತ್ಸವ ಹಿನ್ನೆಲೆಯಲ್ಲಿ ನಗರದಾದ್ಯಂತ ಹೆಚ್ಚಿನ ನಿಗಾ ವಹಿಸಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.