ಬೆಳಗಾವಿ: ತಾಲ್ಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದಲ್ಲಿ ಸೋಮವಾರ ಸಮೃದ್ಧಿ ರಾಯಣ್ಣ ನಾವಿ ಎಂಬ ನಾಲ್ಕು ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಸೋಮವಾರ ಬೆಳಿಗ್ಗೆ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿ ದಿಢೀರ್‌ನೇ ಅನಾರೋಗ್ಯಕ್ಕೆ ಒಳಗಾದಳು. ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಘಟನೆ ಬಗ್ಗೆ ಮಾಹಿತಿ ನೀಡಿದ ಬಾಲಕಿಯ ಅಜ್ಜ ಸುನೀಲ ಹಂಪನ್ನವರ, ‘2021ರಲ್ಲಿ ನನ್ನ ಪುತ್ರಿಯ (ಬಾಲಕಿಯ ತಾಯಿ) ಕೊಲೆ ಮಾಡಲಾಗಿದೆ. ಆಕೆಯ ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ಮಹಾರಾಷ್ಟ್ರದ ನಾಗ್ಪುರದ ಕಾರದಾ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಪ್ರಕರಣ ತನಿಖೆ ನಡೆಯುವಾಗಲೇ ನನ್ನ ಮೊಮ್ಮಗಳ ಸಾವಾಗಿದೆ. ಇದು ಅನುಮಾನಾಸ್ಪದ ಸಾವು ಆಗಿದ್ದು, ತನಿಖೆ ನಡೆಸಬೇಕು’ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕಿಯ ಮಲತಾಯಿ ಸಪ್ನಾ ನಾವಿ, ‘ರಾಯಣ್ಣ ಜೊತೆ ಮದುವೆಯಾದ ದಿನದಿಂದ ಮಗು ನನ್ನ ಬಳಿ ಇತ್ತು. ಮೊದಲಿನಿಂದಲೂ ಅನಾರೋಗ್ಯ ಸಮಸ್ಯೆಯಿದ್ದ ಕಾರಣ ಜೋಪಾನ ಮಾಡಿದ್ದೇನೆ. ಅಗತ್ಯವಿದ್ದಾಗ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದೇನೆ. ಮಲತಾಯಿ ಎಂಬ ಕಾರಣಕ್ಕೆ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ’ ಎಂದರು.
ಮೃತ ಬಾಲಕಿಯ ತಂದೆ ರಾಯಣ್ಣ ಛತ್ತೀಸ್‌ಗಢದಲ್ಲಿ ಸಿಆರ್‌ಪಿಎಫ್ ಯೋಧರಾಗಿದ್ದು, ಅವರು ಬಂದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಪಿಎಂಸಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.