ಕಾಗವಾಡ: ಕಾಂಗ್ರೆಸ್ ಆಡಳಿತದ ಈ ನಾಲ್ಕು ತಿಂಗಳ ಅವಧಿಯಲ್ಲಿಯೇ ರಾಜ್ಯದ ರೈತರಿಗೆ ಭಿಕ್ಷೆ ಬೇಡುವ ದುಸ್ಥಿತಿ ಬಂದಿದ್ದು, ರೈತರ ಉಳಿವಿಗಾಗಿ ಅ.16ರಂದು ಬೆಳಿಗ್ಗೆ 10 ಗಂಟೆಗೆ ಕಾಗವಾಡ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಾವಿರಾರು ರೈತರೊಂದಿಗೆ ಹೋರಾಡಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಅಥಣಿ ಶುಗರ್ಸ ಆವರಣದಲ್ಲಿ ನಡದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ ದಿನಕ್ಕೆ ಒಂದು ಗಂಟೆಯೂ ಕೂಡ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದರ ಪರಿಣಾಮ ಕಷ್ಟ ಪಟ್ಟು ಗುಂಪು ಏತ ನೀರಾವರಿ ಯೋಜನೆಗಳಿಂದ ಕೃಷ್ಣಾ ನದಿಯಿಂದ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಗವಾಡ ಕ್ಷೇತ್ರದ ರೈತರು ಆತ್ಮಹತ್ಯೆ ಮಾಡಿಕೊಂಡರು ಕೂಡ ಆಶ್ಚರ್ಯ ಪಡಬೇಕಿಲ್ಲ. ಕಾಗವಾಡ ಕ್ಷೇತ್ರದ ರೈತರು ಈ ಸರ್ಕಾರದ ಈ ನಡೆಗೆ ಬೇಸತ್ತು ಉದ್ಯೋಗ ಅರಸಿ ಗುಳೆ ಹೊರಟಿದ್ದು, ಈ ಸಂಕಷ್ಟ ಸ್ಥಿತಿಯಿಂದ ಹೊರ ಬರಲು ಕನಿಷ್ಠ 7 ತಾಸು ನಿರಂತರ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ಬರಗಾಲದ ಈ ಸ್ಥಿತಿಗೆ ಬೇಸತ್ತು ಕಾಗವಾಡ ಮತಕ್ಷೇತ್ರದ ಸಂಬರಗಿಯ ರೈತನೋರ್ವ ಈಗಾಗಲೇ ಆತ್ಮಹತ್ಯೆಗೆ ಶರಣಾಗಿದ್ದು, ಇದೇ ರೀತಿ ಮುಂದುವರೆದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದು ನಿಶ್ಚಿತ. ಕಾಗವಾಡ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನ ಅಧಿಕಾರವಧಿಯಲ್ಲಿ ಅನುಷ್ಠಾನಗೊಂಡ ಕೇಂದ್ರದ ಜಲಜೀವನ ಸೇರಿದಂತೆ ಅನೇಕ ಯೋಜನೆಗಳಿಂದ ನೂರಾರು ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡ ಪರಿಣಾಮ ಕಾಗವಾಡ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂತಿಮ ಹಂತ ತಲುಪಿದ್ದ ಖಿಳೇಗಾಂವ ಬಸವೇಶ್ವರ ಯೋಜನೆಯ ಕಾರ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದು, ಇದರಿಂದ ಕಾಗವಾಡ ಕ್ಷೇತ್ರದ 70 ಸಾವಿರ ಎಕರೆ ಭೂಮಿ ನೀರಾವರಿಯಿಂದ ವಂಚಿತಗೊಂಡಿದೆ ಎಂದರು.
ಬಿಜೆಪಿ ಧುರೀಣರಾದ ಮಹಾದೇವ ಕೋರೆ, ತಮ್ಮಣ್ಣ ಪಾರಶೆಟ್ಟಿ, ಈಶ್ವರ ಕುಂಬಾರೆ, ಅಪ್ಪಣ್ಣಾ ಮಗದುಮ್, ರಾಕೇಶ ಪಾಟೀಲ, ರಾಜು ಚವ್ಹಾಣ, ಶಿವಾನಂದ ಮೆಣಸಿ, ವಿಠ್ಠಲ ಮಾಳಿ, ಉತ್ಕರ್ಷ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.