
ಬೆಳಗಾವಿ: ಇಲ್ಲಿಯ ಗೋಮಟೇಶ ವಿದ್ಯಾಪೀಠ ಮತ್ತು ಜೈನ ಗುರುಕುಲ ಟ್ರಸ್ಟ್ ಸಂಸ್ಥೆಯ ನೂತನ ಉತ್ತರಾಧಿಕಾರಿಯಾಗಿ ವೃಷಭ ಸಂಜಯ ಪಾಟೀಲ ಅವರ ಪದಗ್ರಹಣ ಸಮಾರಂಭ ಶುಕ್ರವಾರ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಕೊಲ್ಲಾಪೂರ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಅವರು ವೃಷಭ ಸಂಜಯ ಪಾಟೀಲ ಅವರಿಗೆ ಶಾಸ್ತ್ರೋಕ್ತವಾಗಿ ಉತ್ತರಾಧಿಕಾರಿಯ ಪಟ್ಟಾಭಿಷೇಕ ಮಾಡಿದರು. ಕಳೆದ 30 ವರ್ಷಗಳಿಂದ ಗೋಮಟೇಶ ವಿದ್ಯಾಪೀಠದ ಅಧಿಷ್ಠಾತರಾಗಿ ಕಾರ್ಯ ನಿರ್ವಹಿಸಿದ, ಮಾಜಿ ಶಾಸಕ ಸಂಜಯ ಪಾಟೀಲ ಅವರು ಸ್ವತಃ ತಮ್ಮ ಹುದ್ದೆಯಿಂದ ನಿರ್ಗಮಿಸಿ ನೂತನ ಅಧಿಷ್ಠಾತ ನೇಮಕ ಮಾಡಲು ಅನುವು ಮಾಡಿಕೊಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಫ್ರಭಾಕರ ಕೋರೆ, ‘ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ವಿಶೇಷ ಛಾಪು ಮೂಡಿಸಿದ ಘೋಮಟೇಶ ವಿದ್ಯಾಪೀಠ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಮನೆಮಾತಾಗಿದೆ. ಇನ್ನು ಮುಂದೆ ಸಂಜಯ ಪಾಟೀಲ ಅವರು ತಮ್ಮ ಜನಪರ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಿ’ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ‘ಇದೊಂದು ಅಪರೂಪದ ಕಾರ್ಯಕ್ರಮ. ಇಂದಿನ ಕಾಲದಲ್ಲಿ ಯಾರೂ ಸಹ ಅಧಿಕಾರವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಸಂಜಯ ಪಾಟೀಲ ಅವರು ತಮ್ಮ ಅಧಿಕಾರವನ್ನು ತಮ್ಮ ಮಗನಿಗೆ ನೀಡವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ’ ಎಂದರು.
ಶಾಸಕ ಅಭಯ ಪಾಟೀಲ ಮಾತನಾಡಿ, ‘ಕಳೆದ 30 ವರ್ಷಗಳಿಂದ ಸಂಜಯ ಪಾಟೀಲ ಅನೇಕ ಸವಾಲುಗಳನ್ನು ಎದುರಿಸಿ ಈ ಸಂಸ್ಥೆಯನ್ನು ಇಂದು ಹೆಮ್ಮರವಾಗಿ ಬೆಳೆಸಿದ್ದಾರೆ. ಅವರು ಬೆಳೆಸಿದ ಶೀಕ್ಷಣ ಸಂಸ್ಥೆಯನ್ನು ಇನ್ನಷ್ಟು ಎತ್ತರಕೆ ಬೆಳೆಸುವ ಜವಾಬ್ದಾರಿ ನೂತನ ಉತ್ತರಾಧಿಕಾರಿಗಳ ಮೇಲಿದೆ’ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಜಯ ಪಾಟೀಲ ಮಾತನಾಡಿದರು. ಶಾಸಕ ವಿಠ್ಠಲ ಹಲಗೇಕರ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ರಮೇಶ ಕತ್ತಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ, ವೀರಕುಮಾರ ಪಾಟೀಲ, ಮಾಜಿ ಶಾಸಕರಾದ ಅನಿಲ ಬೆನಕೆ, ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡಗೌಡರ, ಮಹಾದೇವಪ್ಪ ಯಾದವಾಡ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಸುನಿಲ ಹನಮಣ್ಣವರ, ಉದ್ಯಮಿ ಗೋಪಾಲ ಜಿನಗೌಡ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಹಲವರು ವೇದಿಕೆ ಮೇಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.