ADVERTISEMENT

ಬೆಳಗಾವಿ: ಜಿಲ್ಲೆಯ ಎಲ್ಲೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 3:59 IST
Last Updated 8 ಆಗಸ್ಟ್ 2022, 3:59 IST
ರಾಯಬಾಗದಲ್ಲಿ ಸೋಮವಾರ  ಮಳೆ ನೀರು ರಸ್ತೆಯಲ್ಲಿ ಹೊಳೆಯಂತೆ ಹರಿಯಿತು
ರಾಯಬಾಗದಲ್ಲಿ ಸೋಮವಾರ ಮಳೆ ನೀರು ರಸ್ತೆಯಲ್ಲಿ ಹೊಳೆಯಂತೆ ಹರಿಯಿತು   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆ ಭಾನುವಾರ ರಾತ್ರಿಯಿಡೀ ಉತ್ತಮ ಮಳೆ ಸುರಿದಿದೆ. ಸೋಮವಾರ ಬೆಳಿಗ್ಗೆ ಕೂಡ ತುಂತುರು ಮಳೆ ಬೀಳುತ್ತಿದೆ.

ನಗರದ ಸಫಾರ ಗಲ್ಲಿಯಲ್ಲಿ ಭಾನುವಾರ ಧಾರಾಕಾರ ಮಳೆಗೆ ಮನೆಯೊಂದು ಕುಸಿದಿದ್ದು ಮನೆಯಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ಬಸವರಾಜ ಹಂಗರಕಿ ಹಾಗೂ ಶಂಕರೆವ್ವ ದಂಪತಿಯ ಮನೆಯ ಚಾವಣಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿತು. ದಂಪತಿ ಇನ್ನೊಬ್ಬರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದೆ.

ಇನ್ನೊಂದೆಡೆ "ಶುಕ್ರವಾರ ಪೇಟೆ"ಯಲ್ಲಿ ರಸ್ತೆಯ ಮಧ್ಯದಲ್ಲಿಯೇ ಇದ್ದ ಚೇಂಬರ್ 12 ಅಡಿಗಳಷ್ಟು ಕುಸಿಯಿತು. ಅಪಾಯ ಸಂಭವಿಸುವ ಮುನ್ನ ಪಾಲಿಕೆ ಸದಸ್ಯ ನಿತಿನ್ ಜಾಧವ ರಸ್ತೆ ದುರಸ್ತಿ ಮಾಡಿಸಿದರು. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿ ಯಾರೂ ಓಡಾಡದಂತೆ ಪೊಲೀಸರು ಬ್ಯಾರಿಕೇಡ್ ಇಟ್ಟಿದ್ದಾರೆ.

ADVERTISEMENT

ಉಳಿದಂತೆ, ರಾಯಬಾಗ ಪಟ್ಟಣದಲ್ಲಿಯೂ ಧಾರಾಕಾರ ಮಳೆ ಸುರಿದಿದ್ದರಿಂದ ರಸ್ತೆಗಳ ಮೇಲೆ ನೀರು ಹೊಳೆಯಂತೆ ಹರಿಯಿತು.

ಬೈಲಹೊಂಗಲ, ಚಿಕ್ಕೋಡಿ, ಖಾನಾಪುರ, ಸವದತ್ತಿ, ರಾಮದುರ್ಗ, ಹಿರೇಬಾಗೇವಾಡಿ, ನೇಸರಗಿ, ಕೌಜಲಗಿ, ಹುಕ್ಕೇರಿ, ಮೂಡಲಗಿ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದಿದೆ.

ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

ಧಾರಾಕಾರ ಮಳೆಯ ಕಾರಣ ಬೆಳಗಾವಿ ನಗರ, ಬೆಳಗಾವಿ ತಾಲ್ಲೂಕು ಹಾಗೂ ಖಾನಾಪುರ ತಾಲ್ಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದರು. ಆದರೆ ಅಷ್ಟರೊಳಗೆ ಬಹುಪಾಲು ಮಕ್ಕಳು ಶಾಲೆಗಳಿಗೆ ತೆರಳಿದ್ದರು. ಅಲ್ಲಿನ ಶಿಕ್ಷಕರು ರಜೆಯ ವಿಷಯ ತಿಳಿಸಿದ ಮೇಲೆ ಮಕ್ಕಳನ್ನು ಮರಳಿ ಮನೆಗೆ ಕರೆತರಲು ಪಾಲಕರು ಪರದಾಡುವಂತಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.