ADVERTISEMENT

ಪಂಚಾಯ್ತಿ ಸದಸ್ಯನ ಕೊಲೆ: ರಾಜಕೀಯ ವೈಷಮ್ಯಕ್ಕಾಗಿ ಅಧ್ಯಕ್ಷನಿಂದಲೇ ಕೃತ್ಯದ ಆರೋಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 13:28 IST
Last Updated 14 ಡಿಸೆಂಬರ್ 2018, 13:28 IST
ಕೊಲೆಯಾದ ಬನ್ನೆಪ್ಪ ಪಾಟೀಲ
ಕೊಲೆಯಾದ ಬನ್ನೆಪ್ಪ ಪಾಟೀಲ   

ಬೆಳಗಾವಿ: ತಾಲ್ಲೂಕಿನ ಹೊಸವಂಟಮೂರಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಗುಂಪೊಂದು ಹೊಸವಂಟಮೂರಿ ಗ್ರಾಮ ಪಂಚಾಯ್ತಿ ಸದಸ್ಯ ಬನ್ನೆಪ್ಪ ನಾಗಪ್ಪ ಪಾಟೀಲ (38) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೊಸವಂಟಮೂರಿ ಗ್ರಾಮದ ಪ್ರಶಾಂತ ಸತ್ಯಪ್ಪ ಬೋರಿ ಹಾಗೂ ಮಹಾಂತೇಶ ಪರಪ್ಪ ಮೇಲಗಡೆಮನೆ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಪ್ಪ ರಾಯಪ್ಪ ವಣ್ಣೂರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ 3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ 20 ಹೆಚ್ಚಿನ ಸದಸ್ಯರು ಆಗಾಗ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಅವರ ವಿರುದ್ಧ ಸದಸ್ಯರ ಗುಂಪೊಂದು ಅವಿಶ್ವಾಸ ನಿರ್ಣಯಕ್ಕೆ ಯತ್ನಿಸಿತ್ತು. ಡಿ. 7ರಂದು ಬನ್ನೆಪ್ಪ ಪಾಟೀಲ ನೇತೃತ್ವದಲ್ಲಿ 20 ಸದಸ್ಯರು ಮತ್ತೊಮ್ಮೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಡಿ. 17ರಂದು ಈ ಕುರಿತು ಸಭೆಯೂ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ.

ADVERTISEMENT

‘ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ಆಕ್ರೋಶಗೊಂಡಿದ್ದ ಪಂಚಾಯ್ತಿ ಅಧ್ಯಕ್ಷ ಶಿವಪ್ಪ ರಾಯಪ್ಪ ವಣ್ಣೂರ, ಇದಕ್ಕೆ ಬನ್ನೆಪ್ಪ ಕಾರಣವೆಂದು 15 ಜನರ ಗುಂಪು ಕಟ್ಟಿಕೊಂಡು ಗುರುವಾರ ತಡರಾತ್ರಿ ಕೊಡಲಿ, ಕಬ್ಬಿಣದ ರಾಡು ಮೊದಲಾದ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜಗಳ ಬಿಡಿಸಲು ಬಂದ ಇಬ್ಬರ ಮೇಲೂ ಹಲ್ಲೆ ನಡೆಸಿ ‍ಪರಾರಿಯಾಗಿದ್ದಾರೆ. ಅಧ್ಯಕ್ಷರನ್ನು ಪ್ರಮುಖ ಆರೋಪಿಯನ್ನಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಕಾಕತಿ ಠಾಣೆ ಪೊಲೀಸರು ಮಾಹಿತಿ ನೀಡಿದರು.

‘ಘಟನೆಯಲ್ಲಿ ಅಧ್ಯಕ್ಷ, ಆರೋಪಿ ಶಿವಪ್ಪಗೂ ಗಾಯಗಳಾಗಿವೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅಲ್ಲಿಂದ ಬಿಡುಗಡೆಯಾಗುತ್ತಿದ್ದಂತೆಯೇ ಬಂಧಿಸಲಾಗುವುದು. ಉಳಿದವರ ಪತ್ತೆಗೂ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿಯಲ್ಲಿ ಕೈಗೊಂಡಿರುವ ಅವಿಶ್ವಾಸ ನಿರ್ಣಯ ಪ್ರಶ್ನಿಸಿ ಅಧ್ಯಕ್ಷ ಶಿವಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದು ವಿಚಾರಣೆ ಹಂತದಲ್ಲಿದೆ. ಕೊಲೆಯಾದ ಬನ್ನೆಪ್ಪ ಪತ್ನಿ ಸವಿತಾ ಕೂಡ ಪಂಚಾಯ್ತಿ ಸದಸ್ಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.