ADVERTISEMENT

‘ಅಂಗವೈಕಲ್ಯ ಶಾಪ, ಪಾಪವಲ್ಲ’

ಶ್ರವಣೋಪಕರಣ ವಿತರಣಾ ಶಿಬಿರದಲ್ಲಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 13:44 IST
Last Updated 8 ಜುಲೈ 2019, 13:44 IST
ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರು ಸೋಮವಾರ ವಿದ್ಯಾರ್ಥಿನಿಗೆ ಶ್ರವಣೋಪಕರಣ ಹಾಕಿದರು
ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರು ಸೋಮವಾರ ವಿದ್ಯಾರ್ಥಿನಿಗೆ ಶ್ರವಣೋಪಕರಣ ಹಾಕಿದರು   

ಬೆಳಗಾವಿ: ‘ಅಂಗವೈಕಲ್ಯ ಎನ್ನುವುದು ಶಾಪವಲ್ಲ; ಪೂರ್ವಜನ್ಮದಲ್ಲಿ ಮಾಡಿದ ಪಾಪವೂ ಅಲ್ಲ. ಅದು ಶಾರೀರಿಕ ಚಲನಶೀಲತೆಯಲ್ಲಿನ ದುರ್ಬಲತೆ ಮಾತ್ರ. ಸಕಾಲದಲ್ಲಿ ಸರಿಯಾದ ಮಾರ್ಗದರ್ಶನ ಮತ್ತು ಉಪಚಾರ ಸಿಕ್ಕಲ್ಲಿ ವಿಶೇಷ ಸಾಧನೆ ಮಾಡಬಲ್ಲರು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು.

ಭಾರತೀಯ ರೆಡ್‌ ಕ್ರಾಸ್ ಸಂಸ್ಥೆ ಬೆಳಗಾವಿ ಶಾಖೆ, ಧಾರವಾಡದ ಜೆಎಸ್ಎಸ್ ಕಾಲೇಜು, ಮುಂಬೈನ ಅಲಿಯಾವರ್ ಜಂಗ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಮತ್ತು ಹಿಯರಿಂಗ್‌ ಡಿಸೆಬಿಲಿಟಿ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಿಂದ ಸೋಮವಾರ ವತಿಯಿಂದ ಆಯೋಜಿಸಿದ್ದ ವಾಕ್ ಮತ್ತು ಶ್ರವಣ ದೋಷ ತಪಾಸಣೆ, ಉಚಿತ ಶ್ರವಣೋಪಕರಣ ವಿತರಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘‌ಜಗತ್ತಿನಲ್ಲಿ ಬಹಳಷ್ಟು ಮಂದಿ ಅಂಗವಿಕಲರು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಾ ಸಮಾಜದ ಮುಖ್ಯವಾಹಿನಿಗೆ ಬಂದು ಅಭಿವೃದ್ಧಿ ಪರ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿಯೂ ಅಂಗವಿಕಲರಲ್ಲಿರುವ ಸುಪ್ತ ಪ್ರತಿಭೆ ಗುರುತಿಸಿ, ಬೆಳೆಸುವ ಕಾರ್ಯಗಳನ್ನು ಸಾಮಾಜಿಕ ಸಂಸ್ಥೆಗಳು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಅಲಿಯಾವರ್‌ ಜಂಗ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಕಮ್ಯೂನಿಟಿ ವಿಭಾಗದ ಮುಖ್ಯಸ್ಥ ಡಾ.ಆರ್.ಡಿ. ಶರ್ಮಾ ಮಾತನಾಡಿ, ‘ಪಾಲಕರು ಮಕ್ಕಳಲ್ಲಿರುವ ಅಂಗಾಂಗ ದೋಷಗಳ ಕಡೆಗೆ ವಿಶೇಷ ಗಮನಹರಿಸಬೇಕು. ದೋಷಗಳಿದ್ದಲ್ಲಿ ಪರೀಕ್ಷಿಸಿ ಉಪಚಾರ ಕೊಡಿಸಲು ತ್ವರಿತ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ತೀವ್ರತರವಾದ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ಬೆಳಗಾವಿ ಶಾಖೆ ಅಧ್ಯಕ್ಷ ಡಾ.ಎಸ್.ಬಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಎಸ್.ಎಂ. ಹಂಜಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ, ರೆಡ್‌ ಕ್ರಾಸ್ ಸಂಸ್ಥೆ ಬೆಳಗಾವಿ ಶಾಖೆಯ ಕಾರ್ಯದರ್ಶಿ ವಿಕಾಸ ಕಲಘಟಗಿ, ಕರ್ನಲ್ ವಿನೋದಿನಿ, ಧಾರವಾಡದ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಪ್ರಾಚಾರ್ಯ ಜೆ.ಎಜೆ. ಪಟಕಲ್ ಮಥಾಯಿ, ಸಮಗ್ರ ಶಿಕ್ಷಣ ಯೋಜನೆಯ ಉಪಯೋಜನಾ ಸಮನ್ವಯಾಧಿಕಾರಿ ಕೆ.ಎಸ್. ನಂದೇರ, ಸಹಾಯಕ ಯೋಜನಾ ಸಮನ್ವಯಾಧಿಕಾರಿಆರ್.ಜಿ. ಮೆಳವಂಕಿ ಇದ್ದರು.

ಡಾ.ವಿ.ಡಿ. ಢಾಂಗೆ ಸ್ವಾಗತಿಸಿದರು. ಸಂಯೋಜಕ ಅಶೋಕ ಬದಾಮಿ ಪ್ರಸ್ತಾವಿಕ ಮಾತನಾಡಿದರು. ರೆಡ್‌ಕ್ರಾಸ್ ಸಂಸ್ಥೆ ಬೆಳಗಾವಿ ಶಾಖೆ ಜಂಟಿ ಕಾರ್ಯದರ್ಶಿ ಡಾ.ಡಿ.ಎಂ. ಮಿಸಾಳೆ ನಿರೂಪಿಸಿದರು. ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆ ಪತ್ರಾಂಕಿತ ಸೂಪರಿಂಟೆಂಡೆಂಟ್ ಆರ್.ಬಿ. ಬನಶಂಕರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.