ADVERTISEMENT

‘ನಷ್ಟದ ಅಂದಾಜು ವರದಿ ಶೀಘ್ರ ಸಲ್ಲಿಕೆ’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 14:21 IST
Last Updated 13 ಆಗಸ್ಟ್ 2019, 14:21 IST
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಹದಿಂದ ಆಗಿರುವ ಸ್ಥಳಗಳನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಗಳವಾರ ಪರಿಶೀಲಿಸಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಹದಿಂದ ಆಗಿರುವ ಸ್ಥಳಗಳನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಗಳವಾರ ಪರಿಶೀಲಿಸಿದರು   

ಬೆಳಗಾವಿ: ‘ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಹದಿಂದ ಆಗಿರುವ ನಷ್ಟದ ಕುರಿತು ಅಂದಾಜುಪಟ್ಟಿ ಸಿದ್ಧಪಡಿಸಿ ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಿ, ಪರಿಹಾರ ಕಲ್ಪಿಸುವಂತೆ ಕೋರಲಾಗುವುದು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.

ಮಂಗಳವಾರ ಕ್ಷೇತ್ರದ ಹಲವೆಡೆ ಪ್ರವಾಹ ನಷ್ಟದ ಪರಿಶೀಲನೆ ನಡೆಸಿದ ಅವರು, ‘ನಷ್ಟದ ಅಂದಾಜು ಸಿದ್ಧಪಡಿಸಲು ಅಧಿಕಾರಿಗಳಿಗೂ ಸೂಚಿಸಲಾಗಿದೆ. ನಮ್ಮ ತಂಡವೂ ತಯಾರಿಸಲಿದೆ. ಎರಡನ್ನೂ ಕ್ರೋಢೀಕರಿಸಿ ಅಂತಿಮ ವರದಿ ತಯಾರಿಸಲಾಗುವುದು. ಕ್ಷೇತ್ರದ ಹಲವು ಕುಟುಂಬಗಳು ಮನೆ, ಹೊಲ–ಗದ್ದೆ ಹಾಗೂ ಬೆಳೆಗಳನ್ನು ಕಳೆದುಕೊಂಡಿವೆ. ಯಾರಿಗೂ ಅನ್ಯಾಯವಾಗದಂತೆ ವರದಿ ಸಿದ್ಧಪಡಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

‘ಗ್ರಾಮೀಣ ಕ್ಷೇತ್ರದಲ್ಲಿ ಗರಿಷ್ಟ ಪ್ರಮಾಣದಲ್ಲಿ ನಷ್ಟವಾಗಿದೆ. ಒಂದು ವರ್ಷದಲ್ಲಿ ಮಾಡಿದ್ದ ಸಾಕಷ್ಟು ಅಭಿವೃದ್ಧಿ ಕೆಲಸಗಳೂ ಕೊಚ್ಚಿಕೊಂಡು ಹೋಗಿವೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೂ ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿವೆ’ ಎಂದರು.

ADVERTISEMENT

ಬೆಳಗುಂದಿ, ರಕ್ಕಸಕೊಪ್ಪ, ಸೋನೊಲಿ, ಎಳೆಬೈಲ್ ಗ್ರಾಮಗಳಿಗೆ ಭೇಟಿ ಕೊಟ್ಟು ನಿರಾಶ್ರಿತರ ಸಂಕಷ್ಟಗಳಿಗೆ ಸ್ಪಂದಿಸಿದರು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿಯಿಂದ ಬಿ.ಜಿ. ರಘು, ಎಚ್.ಜಿ. ಗಣೇಶ, ಬಿ.ಜಿ. ಮಲ್ಲೇಶಪ್ಪ, ಕರಿಯಪ್ಪ ನೇತೃತ್ವದ 60 ಮಂದಿಯ ತಂಡ ನಿರಾಶ್ರಿತರಿಗೆ ಬಟ್ಟೆ, ಆಹಾರ ಪರಾರ್ಥ ವಿತರಿಸಿದರು. ಅವರಿಗೆ ಶಾಸಕರು ಧನ್ಯವಾದ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.