ADVERTISEMENT

ಬೆಳಗಾವಿ ಜಿಲ್ಲೆಯಲ್ಲಿ ಮುಂದುವರಿದ ಮಳೆ: ಮತ್ತೊಂದು ಶಾಲೆಯ ಗೋಡೆ ಕುಸಿತ

ಜಲಾಶಯ ಮಟ್ಟ ಏರಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 6:15 IST
Last Updated 11 ಜುಲೈ 2022, 6:15 IST
   

ಖಾನಾಪುರ (ಬೆಳಗಾವಿ ಜಿಲ್ಲೆ): ನಿರಂತರ ಮಳೆಯಿಂದಾಗಿ ತಾಲ್ಲೂಕಿನ ಮುಡೇವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಭಾನುವಾರ ರಾತ್ರಿ ಕುಸಿದು ಬಿದ್ದಿದೆ.

ಭಾನುನಾರ ಬೆಳಿಗ್ಗೆಯಿಂದಲೇ ಗೋಡೆ ಬಿರುಕು ಬಿಡಲು ಆರಂಭಿಸಿತ್ತು. ರಜಾ ದಿನವಾದ್ದರಿಂದ ಶಾಲೆಯಲ್ಲಿ ಯಾರೂ ಇರಲಿಲ್ಲ. ಮಕ್ಕಳು ಕೂಡ ಆಟದ ಮೈದಾನಕ್ಕೆ ಬಂದಿರಲಿಲ್ಲ. ಹೀಗಾಗಿ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಶನಿವಾರ ಕೂಡ ಗರ್ಲಗುಂಜಿ ಗ್ರಾಮದ ಶಾಲೆಯ ಗೋಡೆ ಕುಸಿದಿತ್ತು.

ADVERTISEMENT

ಕಾಡಂಚಿನಲ್ಲಿ ಮಳೆ ಮುಂದುವರಿದಿದ್ದು, ತುಂಬ ಹಳೆಯ ಶಾಲೆಗಳು ಅಪಾಯದ ಅಂಚಿನಲ್ಲಿವೆ. ತಕ್ಷಣ ಅಧಿಕಾರಿಗಳು ಸುರಕ್ಷತೆ ಪರಿಶೀಲಿಸಬೇಕು ಎಂದು ಮುಡೇವಾಡಿ ಜನ ಆಗ್ರಹಿಸಿದ್ದಾರೆ.

ಬೆಳಗಾವಿ ವರದಿ:ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆ ಉತ್ತಮ ಮಳೆ ಸುರಿಯುತ್ತಿದೆ.

ಬೆಳಗಾವಿ ನಗರ, ತಾಲ್ಲೂಕು, ಖಾನಾಪುರ ತಾಲ್ಲೂಕು, ಚಿಕ್ಕೋಡಿ, ಹುಕ್ಕೇರಿ ತಾಲ್ಲೂಕುಗಳಲ್ಲಿ ತಡರಾತ್ರಿಯಿಂದಲೇ ಮಳೆ ಬೀಳುತ್ತಿದೆ.

ಜಲಾಶಯ ಮಟ್ಟ:ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕೂಡ ಶನಿವಾರ ತುಸು ಬಿಡುವುನೀಡಿದ್ದ ಮಳೆ, ಭಾನುವಾರ ರಾತ್ರಿಯಿಂದ ಮತ್ತೆ ಬಿರುಸು ಪಡೆದಿದೆ.

ಹಿಡಕಲ್ಲಿನ ರಾಜಾ ಲಖಮಗೌಡ ಜಲಾಶಯದಲ್ಲಿ ಸೋಮವಾರ 2,116.033 ಅಡಿ ನೀರು ಸಂಗ್ರಹವಾಗಿದೆ. ಶನಿವಾರ 2,108.333 ಅಡಿ ಇತ್ತು. ಒಂದೇ ದಿನದಲ್ಲಿ 8 ಅಡಿಯಷ್ಟು ಏರಿಕೆ ಕಂಡಿದೆ.

ಘಟಪ್ರಭೆಯಲ್ಲಿ 27,398 ಕ್ಯುಸೆಕ್ ಒಳಹರಿವು ಇದೆ. 51 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಈವರೆಗೆ 15.527 ಟಿಎಂಸಿ ಅಡಿ ಸಂಗ್ರಹವಿದೆ.

ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿಯ ರೇಣುಕಾ ಸಾಗರ ಜಲಾಶಯದಲ್ಲಿ ಕೂಡ ಒಂದೂವರೆ ಅಡಿಯಷ್ಟು ನೀರು ಏರಿಕೆಯಾಗಿದೆ.

ಶನಿವಾರ 2,056.40 ಅಡಿ ನೀರಿತ್ತು. ಭಾನುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ 24 ತಾಸುಗಳಲ್ಲಿ 2,057.66 ಅಡಿ ದಾಖಲಾಗಿದೆ.

ಮಲಪ್ರಭಾ ನದಿಯಲ್ಲಿ 10,402 ಕ್ಯುಸೆಕ್ ಒಳಹರಿವು ಇದ್ದು, 197 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.