ADVERTISEMENT

ಬೆಳಗಾವಿ: ಧಾರಾಕಾರ ಮಳೆ; 16 ಸೇತುವೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 15:25 IST
Last Updated 25 ಜೂನ್ 2025, 15:25 IST
<div class="paragraphs"><p>ಮಲಪ್ರಭಾ ನದಿ ತೀರದಲ್ಲಿರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಹಬ್ಬನಹಟ್ಟಿಯ ಆಂಜನೇಯ ದೇವಾಲಯ ಬುಧವಾರ ಮುಳುಗಡೆಯಾಗಿದೆ</p></div>

ಮಲಪ್ರಭಾ ನದಿ ತೀರದಲ್ಲಿರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಹಬ್ಬನಹಟ್ಟಿಯ ಆಂಜನೇಯ ದೇವಾಲಯ ಬುಧವಾರ ಮುಳುಗಡೆಯಾಗಿದೆ

   

ಬೆಳಗಾವಿ: ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಬುಧವಾರವೂ ಧಾರಾಕಾರ ಮಳೆ ಸುರಿದಿದೆ. ಇದರಿಂದ ಜಿಲ್ಲೆಯ 16 ಸೇತುವೆಗಳು ಜಲಾವೃತಗೊಂಡಿವೆ. ಮೂಡಲಗಿ ಅರಳಿಕಟ್ಟಿ ಗ್ರಾಮದಲ್ಲಿ ಮಳೆ–ಗಾಳಿಯಿಂದ ವಿದ್ಯುತ್‌ ತಂತಿ ತುಂಡರಿಸಿ ಮೂರು ಎಮ್ಮೆ, ಒಂದು ಕುದುರೆ ಮೃತಪಟ್ಟಿವೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ ಕೃಷ್ಣಾ ನದಿಗೆ 73,042 ಕ್ಯೂಸೆಕ್ ಹೊರ ಹರಿವು ಇದ್ದು, ಕಲ್ಲೋಳ ಬಳಿಯಲ್ಲಿ ದೂಧಗಂಗಾ ನದಿಯಲ್ಲಿ 19,008 ಕ್ಯೂಸೆಕ್, ಕೃಷ್ಣಾ ನದಿಯಲ್ಲಿ 92,050 ಕ್ಯೂಸೆಕ್ ನೀರು ಹರಿಯುತ್ತಿದೆ.

ADVERTISEMENT

ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರ, ಮಲಿಕವಾಡ– ದತ್ತವಾಡ ಸೇತುವೆಗಳು, ನಿಪ್ಪಾಣಿ ತಾಲ್ಲೂಕಿನ ಕಾರದಗಾ– ಭೋಜ, ಭೋಜವಾಡಿ– ಕುನ್ನೂರ, ಸಿದ್ನಾಳ– ಅಕ್ಕೋಳ, ಜತ್ರಾಟ– ಭಿವಶಿ, ಹುನ್ನರಗಿ– ಮಮದಾಪೂರ, ಕುನ್ನೂರ– ಬಾರವಾಡ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ.

ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ಜಲಾನಯನ ಪ್ರದೇಶದಲ್ಲಿ ಬಿದ್ದ ಮಳೆಯಿಂದಾಗಿ ಯರನಾಳ ಸೇತುವೆ, ಸಂಕೇಶ್ವರ ಸೇತುವೆ ಹಾಗೂ ಘಟಪ್ರಭಾ ನದಿಗೆ ನಿರ್ಮಿಸಿದ ದಡ್ಡಿ, ಶೆಟ್ಟಿಹಳ್ಳಿ– ಸಲಾಮವಾಡಿ ಸೇತುವೆಗಳು ಮುಳುಗಡೆಯಾಗಿವೆ. ಘಟಪ್ರಭಾ ನದಿ ಮೈದುಂಬಿ ಹರಿಯುತ್ತಿದ್ದು, ಮೂಡಲಗಿ ತಾಲ್ಲೂಕಿನ ಅವರಾದಿ ಸೇತುವೆ ಮುಳುಗಡೆಯಾಗಿದೆ. ಇದರಿಂದ ಮೂಡಲಗಿ– ಸುಣಧೋಳಿ ಸಂಪರ್ಕ ಕಡಿತಗೊಂಡಿದೆ.

ಮೂಡಲಗಿ ತಾಲ್ಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ವಿದ್ಯುತ್‌ ಕಂಬದಲ್ಲಿರುವ ಇನ್ಸುಲೇಟರ್ ಸಿಡಿದು ವಿದ್ಯುತ್‌ ತಂತಿ ಕತ್ತರಿಸಿ ಬಿದ್ದು, ಶಂಕರ ತೇರದಾಳ ಅವರಿಗೆ ಸೇರಿದ್ದ ಮೂರು ಎಮ್ಮೆ ಮತ್ತು ಒಂದು ಕುದರೆ ಮೃತಪಟ್ಟಿವೆ.

ಖಾನಾಪುರ ತಾಲ್ಲೂಕಿನ ಭೀಮಗಡ ಅರಣ್ಯ ಪ್ರದೇಶದಲ್ಲೂ ಧಾರಾಕಾರ ಮಳೆ ಮುಂದುವರಿದಿದೆ. ಸಿಂಧನೂರು– ಹೆಮ್ಮಡಗಾ ಮಾರ್ಗದ ಅಲಾತ್ರಿ ಹಳ್ಳದ ಸೇತುವೆ, ದೇವಾಚಿಹಟ್ಟಿ– ಜಾಂಬೋಟಿ ಮಾರ್ಗಗಳ ಎರಡು ಸೇತುವೆಗಳ ಮೇಲೆ ಹಲವು ಅಡಿಗಳಷ್ಟು ನೀರು ಹರಿಯುತ್ತಿದ್ದು, ಈ ಮೂರೂ ಸೇತುವೆಗಳಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.