ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಮುಂದುವರೆದ ಪರಿಣಾಮವಾಗಿ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಲ್ಲಿ ನೀರು ಹರಿಯುವ ಪ್ರಮಾಣದಲ್ಲಿ ಮತ್ತೇ 5-6 ಅಡಿಯಷ್ಟು ಹೆಚ್ಚಳವಾಗಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಾಪೂರೆ ಬ್ಯಾರೇಜ್ ನಿಂದ 63,500 ಕ್ಯುಸೆಕ್ ಹೊರ ಹರಿವು ಇದ್ದು, ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ದೂಧಗಂಗಾ ನದಿಗೆ 11,960 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರು ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಗೆ 75.460 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 6 ಟಿಎಂಸಿ ಅಡಿ ನೀರು ಸಂಗ್ರಹ ಸಾಮಥ್ರ್ಯದ ಹಿಪ್ಪರಗಿ ಬ್ಯಾರೇಜಿನಲ್ಲಿ 48.810 ಕ್ಯುಸೆಕ್ ಒಳ ಹರಿವು ಇದೆ. ಇನ್ನು ದೂಧಗಂಗಾ ನದಿಗೆ ಅಡ್ಡಲಾಗಿರುವ ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ-ದತ್ತವಾಡ, ನಿಪ್ಪಾಣಿ ತಾಲ್ಲೂಕಿನ ಕಾರದಗಾ-ಬೋಜ, ಬೋಜವಾಡಿ-ಕುನ್ನೂರು ಸೇತುವೆಗಳು ಜಲಾವೃತಗೊಂಡ ಸ್ಥಿತಿಯಲ್ಲಿವೆ.
ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕೊಯ್ನಾದಲ್ಲಿ 0.7 ಸೆ.ಮೀ, ನವಜಾದಲ್ಲಿ 1.3 ಸೆ.ಮೀ, ಮಹಾಬಳೇಶ್ವರದಲ್ಲಿ 2.8 ಸೆ.ಮೀ, ಕಾಳಮ್ಮವಾಡಿಯಲ್ಲಿ 1.5 ಸೆ.ಮೀ, ರಾಧಾನಗರಿಯಲ್ಲಿ 1.1 ಮಿ.ಮೀ ಮಳೆಯು ಮಂಗಳವಾರ ದಾಖಲಾಗಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಪ್ರವಾಹ ಮುನ್ನೆಚ್ಚರಿಕೆ ಸಕಲ ಕ್ರಮಗೊಳ್ಳಲಾಗಿದೆ. ಮಹಾರಾಷ್ಟ್ರದ ಕೃಷ್ಣಾ ಹಾಗೂ ಉಪ ನದಿಗಳ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಮತ್ತೇ ಎರಡು ದಿನಗಳಲ್ಲಿ ಕೃಷ್ಣಾ ಹಾಗೂ ಉಪ ನದಿಗಳಲ್ಲಿ ನೀರಿನ ಹರಿಯುವ ಪ್ರಮಾಣ ಇಳಿಮುಖವಾಗುವ ಸಾಧ್ಯತೆಗಳಿವೆ.
ಮಹಾರಾಷ್ಟ್ರದ ಕೃಷ್ಣಾ ಹಾಗೂ ಪಂಚಗಂಗಾ ಸಂಗಮ ಸ್ಥಳದಲ್ಲಿರುವ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಸುಕ್ಷೇತ್ರ ನರಸಿಂಹವಾಡಿಯ ದತ್ತ ಮಂದಿರದ ಸುತ್ತಲೂ ನೀರು ಆವರಿಸಿದ್ದು, ಕಳೆದ ಎರಡು ದಿನಗಳಿಂದ ದತ್ತ ದರ್ಶನಕ್ಕೆ ಭಕ್ತರು ಪರದಾಡುವಂತಾಗಿದೆ.ಮಂದಿರದಲ್ಲಿ ದತ್ತಾತ್ರೇಯನ ದರ್ಶನವನ್ನು ಭಕ್ತರು ನದಿ ನೀರಿನಲ್ಲಿಯೇ ಸಾಗಿ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.