ಕಾಗವಾಡ: ಕಳೆದ ಹಲವು ದಿನಗಳಿಂದ ಹೆಸ್ಕಾಂ ಇಲಾಖೆಯಿಂದ ಅಸರ್ಮಕವಾಗಿ ವಿದ್ಯುತ್ ಪೂರೈಕೆ ಆಗುತ್ತಿರುವುದನ್ನು ಖಂಡಿಸಿ ಕಾಗವಾಡ ಭಾಗದ ರೈತರು, ಕರವೇ ಕಾರ್ಯಕರ್ತರು ಶುಕ್ರವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಕೈಗೊಂಡರು.
ರೈತ ಮುಖಂಡ ಶಶಿಕಾಂತ ಜೋಶಿ ಮಾತನಾಡಿ, ಹೆಸ್ಕಾಂ ಇಲಾಖೆ ತೆಗೆದುಕೊಂಡ ನಿರ್ಣಯ ರೈತರಿಗೆ ಅನ್ಯಾಯವಾಗಿದ್ದು, ನಮಗೆ ಮೂರು ಗಂಟೆ ವಿದ್ಯುತ್ ನೀಡಿದಲ್ಲಿ ನದಿಯಿಂದ ಪೈಪ್‌ಲೈನ್‌ನಿಂದ ನೀರು ನಮಗೆ ತಲುಪಲು ಒಂದುವರೆ ಗಂಟೆ ಬೇಕು. ನಾವು ಬೆಳೆಗಳಿಗೆ ನೀರು ಉಣಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಇದನ್ನು ಕೈಬಿಟ್ಟು ಮೊದಲಿನಂತೆ ವಿದ್ಯುತ್ ಪೂರೈಕೆ ಮಾಡಬೇಕು. ಬರುವ ಸೋಮವಾರ ಸಮರ್ಪಕವಾಗಿ ವಿದ್ಯುತ್ ಪೂರೈಕೆವಾಗದಿದ್ದರೆ ಮಂಗಳವಾರ ತೀವ್ರವಾದ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಹೆಸ್ಕಾಂ ಇಲಾಖೆ ಅಧಿಕಾರಿ ಡಿ.ಎ. ಮಾಳಿ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ನಿರ್ಮಿತಿಗೆ ತೊಂದರೆವಾಗುತ್ತಿದೆ. ಇದರಿಂದ ಇಲ್ಲಿಯ ರೈತರಿಗೆ ವಿದ್ಯುತ್ ಪೂರೈಸಲು ತೊಂದರೆಯಾಗುತ್ತಿದೆ. ಎಲ್ಲ ಗ್ರಾಮಗಳಿಗೆ ಸಮರ್ಪಕವಾಗಿ ಮುಂದಿನ ದಿನದಲ್ಲಿ ನಾಲ್ಕು ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕರವೇ ಅಧ್ಯಕ್ಷ ಸಿದ್ದು ಒಡೆಯರ, ಶಿವಾನಂದ ನವಿನಾಳೆ, ಗಣೇಶ ಕೊಳೆಕರ, ಪ್ರವೀಣ ಪಾಟೀಲ, ರೈತ ಮುಖಂಡರಾದ ಜ್ಯೋತಿಕುಮಾರ ಪಾಟೀಲ್, ಕಾಕಾ ಪಾಟೀಲ್, ರಮೇಶ್ ಚೌಗಲೆ, ಚಿದಾನಂದ್ ಅವಟಿ, ಅರುಣ್ ಜೋಶಿ, ಅಮರ ಶಿಂದೆ,ಸತ್ತುಗೌಡಾ ಪಾಟೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.